Skip to main content

ಮುಸ್ಸಂಜೆಯ ಮರುಕ



ಸಿರಲ್ಲಿನ ಹಸಿವು ನೀಗಿಸಲಾಗದು
ಜೀವ ಜೈತ್ರ ಯಾತ್ರೆ ಮುಗಿಯುವ ತನಕ.
ಆದರೆ,
ಇಂದು-ನಿನ್ನೆಗಳು ತೋರಿದ ಅಸಹನೆಗೆ ಅಂಜಿ,
ನಾಳೆಯೆನ್ನುವ ಕನಸು ಮುರಿದು ಬಿದ್ದಿದೆ.
ಇಟ್ಟ ದಿಟ್ಟ ಹೆಜ್ಜೆಗಳೇ ಸಮೀಕರಿಸುತ್ತಿವೆ
ರತ್ನಗಂಬಳಿಯ ರಹದಾರಿ, ನಾ ಬಲ್ಲದ ನಾಡಿಗೆ !
ಸೋತು ಸುಣ್ಣವಾದ ತನು-ಮನಗಳ
ವಿನಂತಿಗೆ ನೆರವಾಗುವವರು ಕಾಣುತ್ತಿಲ್ಲ.
ಇಳಿ ಹೊತ್ತು,ಇಳಿ ವಯಸ್ಸಿಗೆ ಲೇವಡಿ ಮಾಡುತ್ತಿದೆ,
ಅಟ್ಟಹಾಸದ ನಗು ಬೀರುತ್ತಿದೆ,
ನಾನಿಲ್ಲದ ತೇದಿಗೆ ಕಾತರಿಸುತ್ತಿರುವಂತಿದೆ.

ಸೂರ್ಯ ರಶ್ಮಿಗೆ ಮೈಯೊಡ್ಡುವ ನವಜಾತ
ಶಿಶುಗಳ ಕಂಡಾಗ ಒಂದೇ ಪ್ರಾರ್ಥನೆ…
ನಕ್ಕು ನಲಿದು ಉಲಿಯುವ ವೇಳೆ
ಕಾಡದಿರಲಿ ಮುಸ್ಸಂಜೆಯ ಮರುಕ.
ಕೊನೆಯಿಲ್ಲದ ಜೀವದಾಸೆಗೆ ತೆರೆ ಎಳೆಯಲು
ಕಾರಣ ಹುಡುಕುತ್ತಿರುವ ಪ್ರಾಣ ಪಕ್ಷಿ,
ಹಲವು ಶಂಕೆಗಳಿಗೆ ತೊತ್ತಾಗಿರುವ ನಾನು
ಇಹಲೋಕದ ವಿದಾಯಕ್ಕೆ ಅಣಿಯಾಗುತ್ತಿದ್ದೇನೆಯೆ..?

ಇಲ್ಲ, ಅಪರ ಭಾನುವಿನ ಜೊತೆ ಈಗಿಂದೀಗಲೇ
ಅಸ್ತಂಗತನಾಗಲು ನನ್ನ ವಿರೋಧವಿದೆ.
ದೇಹದಲ್ಲಿ  ಇನ್ನೂ ಕಾವು ಅಡಗಿದೆ, ಹುದುಗಿದೆ.
ಅವನ ವಕ್ರದೃಷ್ಟಿಗೆ ಮಣಿಯಲಾರೆ, ಪ್ರತಿಭಟಿಸುತ್ತೇನೆ.
ಇದಾವ ಧರ್ಮ ಯುದ್ಧವಲ್ಲ, ಅತೀತ ಭಾವ ಸ್ಪಂದನವಷ್ಟೆ.
ಹೊತ್ತಲ್ಲದ ಹೊತ್ತಲ್ಲಿ, ಋಣಮುಕ್ತಗೊಂಡು
ಪವಡಿಸಲಾರೆ, ಬೆಂಕಿ ಕೆನ್ನಾಲೆಗಳ ನಡುವೆ.
ಗೋಧೂಳಿಯಿಂದಾಗಿ ಅವನಿಂದ ಮರೆಯಾಗಿದ್ದೇನೆ,
ಮರೆಯಾಗುತ್ತೇನೆ ನನ್ನಿಷ್ಟದಂತೆ.



Creative Commons License
ದೀವಟಿಗೆ by ಸಂದೀಪ ಫಡ್ಕೆ, ಮುಂಡಾಜೆ is licensed under a Creative Commons Attribution-NonCommercial-NoDerivs 2.5 India License

Comments