Skip to main content

Posts

Showing posts from January, 2014

ಒಂದು ಸಾಲಿನ ಕತೆ

ಒಂದೇ ಸಾಲಿನಲ್ಲಿ ಉತ್ತರಿಸಲಾಗದು ಬದುಕೆಂಬ ಕ್ಲಿಷ್ಟ ಪ್ರಶ್ನೆ ಪತ್ರಿಕೆಗೆ. ಆಕಾಶಕ್ಕೆ ಏಣಿ ಇಟ್ಟಂತೆ, ಜೀವಮಾನವೇ ಜಾರಿ ಹೋಗುತ್ತದೆ. ದಿನ, ವಾರ, ತಿಂಗಳು ಕೊನೆಗೆ ಸಾಲು ಸಾಲಾಗಿ. ಪರಿವೆಯೇ ಇಲ್ಲದೆ ಕಳೆದುಹೋಗುತ್ತವೆ, ರಾತ್ರಿ ಬೆಳಗಾದಂತೆ ಸಾಲುಗಳು! ಈ ಸಾಲಿನಲ್ಲಿ ಆಗದ್ದು, ಮುಂದಿನ ಸಾಲಿನಲ್ಲಿ ಮಾಡುವ ಇರಾದೆ, ಪ್ರೌಢಿಮೆಯ ಭ್ರಮೆ ಮೈಮನವಿಡೀ ಹಬ್ಬುತ್ತದೆ, ಕಾಲಾಂತರ ಕಡೆಗಣಿಸಿ. ದಿನ ಎಣಿಸಿ, ಗುಣಿಸಿ, ಭಾಗಿಸುವಷ್ಟರಲ್ಲಿ ಆ ಸಾಲೂ ತುಳಿದಿರುತ್ತದೆ ನಿರ್ಗಮನದ ಹಾದಿ. ಮನಸ್ಸು ಮರುಗುತ್ತದೆ ಸಾಲು ಸಾಲುವುದಿಲ್ಲವೆಂದು. ಖಾಲಿ ಕೈಯಲ್ಲಿ ಬಂದು ಹೋಗುವ ನಮಗೂ, ಸಾಲುಗಳಿಗೂ ವ್ಯತ್ಯಾಸವಿಲ್ಲ. ಇಪ್ಪತ್ತೈದರ ಗುಣಾಕಾರದ ಹಬ್ಬಗಳಿಗೆ ಯಾವ ಸಾಲಿನ ಹಂಗಿಹುದೋ ಜಾಸ್ತಿ ? ಸಾಧನೆ, ಪ್ರತಿಷ್ಠೆಯ ಬೆಂಬತ್ತುವ ನಾವು ಸಾಲುಗಳ ಸಾಲಗಾರರಲ್ಲವೆ ? ನೋಡು-ನೋಡುತ್ತಿದ್ದಂತೆ ಮತ್ತೆ ಬಂದೆರಗುತ್ತದೆ, ಯಾವ ಭಕ್ಷೀಸನ್ನೂ ಬೇಡದೆ ಹೊಸ ಸಾಲು, ಹೊಸ ಸವಾಲು, ಹೊಸ ಅಹವಾಲು..!! (ಕೃಪೆ : ಕನ್ನಡ ಪ್ರಭ ) Deevatige by Sandeep Phadke is licensed under a Creative Commons Attribution-NonCommercial 4.0 International License . Based on a work at http://www.deevatige.blogspot.in/ .