Skip to main content

Posts

Showing posts from June, 2018

ನಿರೀಕ್ಷೆ

‘ಅಮ್ಮಾ, ಬಂದಳೇನಮ್ಮಾ...’ ತಿಂಗಳಾಯಿತು ಹೊಸ ಬಟ್ಟೆಗೆ, ಇನ್ನೂ ತೊಡುವ ಭಾಗ್ಯ ಬಂದಿಲ್ಲ. ಎಲ್ಲದಕ್ಕೂ ಯುಗಾದಿ ಬರಬೇಕಂತೆ. ಎಂದು,ಎಂತು ಬರುವಳೋ... ಬಂದು ಹೋಗಿ,ವರುಷ ಕಳೆದು ಯಾದಿಯಲ್ಲಿ ಮೊದಲಾಗಿ ಮತ್ತೆ ಬರುತ್ತಿರುವಳಂತೆ. ಲಜ್ಜೆಯಿಂದ ಹೆಜ್ಜೆಯಿಟ್ಟು, ಮುಡಿಯ ತುಂಬ ಹಸಿರು ಹೊದ್ದು. ಮಂದ್ರ ಮಾರುತದ ಸುಳಿಯಲಿ ನಳನಳಿಸುವ ಸೋದರಿಗಾಗಿ ಕಾಯುತ್ತಿದ್ದೇನೆ. ದಿಡ್ಡಿ ಬಾಗಿಲ ತುಂಬ ಕಣ್ಣ ಪಹರೆ. ಅಮ್ಮ ಮಾಡಿಟ್ಟ ಬಗೆ-ಬಗೆಯ ತಿನಿಸು, ಅಪ್ಪ ತಂದಿಟ್ಟ ಹೊಸ ಪಂಚಾಂಗ, ತಳಿರು-ತೋರಣ, ಚುಕ್ಕಿ ರಂಗೋಲಿ. ಸಾಕಲ್ಲವೇ ಇಷ್ಟು ಅವಳ ಸತ್ಕಾರಕ್ಕೆ ?! ಇನ್ನಾದರೂ ಬರಬಹುದಲ್ಲಾ ಆ ಯುಗಾದಿಗೆ. ಊರು-ಕೇರಿ ತುಂಬಾ ಅವಳದೇ ಪುಕಾರು, ಅಬಾಲವೃದ್ಧರಲ್ಲಿ ಕಾಣುತ್ತಿದೆ- ನನ್ನಂತೆಯೇ ಹುರುಪು-ಚೈತನ್ಯ. ಅದೆಂತಹ ಮೋಡಿಯೋ, ಮೈಮೆಯೋ !! ನವ ಸಂವತ್ಸರದ ಭವಿಷ್ಯ ಬರೆದು, ವಿಕಲ್ಪಗಳ ಎಡರು ತೊಡೆಯಲು, ಕಿವಿಮಾತಿಗೆ ಮಾತು ಬೆರೆಸಲು ಬರುವಳಂತೆ ಯುಗಾದಿ, ನಾಳಿನ ತೇದಿಗೆ. “ಅದೋ ಅಲ್ಲಿ, ಅಪರ ಭಾನು ನಡೆದು ಹೋದ ಚೌಕಿ ಮನೆ ಕಡೆಗೆ. ಯುಗಾದಿಯ ಭವ್ಯ ಸ್ವಾಗತಕ್ಕೆ”. ಅಜ್ಜಿ ಮಾತು ದಿಟವಾದರೆ ಸಾಕು. ‘ಅಮ್ಮಾ, ಯುಗಾದಿ ಬಂದಳೇ...’ ಥಟ್ಟನೆ ಬೇವು-ಬೆಲ್ಲದ ಜೊತೆ ಎದುರುಗೊಂಡಳು – ನನ್ನ ಅಮ್ಮ ಮತ್ತು ನನ್ನ ಯುಗಾದಿ.