ಧೂ ಮಪಾನ, ಮದ್ಯಪಾನದಂತೆ ಮಾದಕ ದ್ರವ್ಯ ಸೇವನೆಯ ಚಟ ಹೊಸ ತಲೆಮಾರಿನ ಯುವಕ/ಯುವತಿಯರಲ್ಲಿ ವಿದೇಶಿ ಮೋಹದಂತೆ ಸದ್ದಿಲ್ಲದೆ ಹರಡುತ್ತಿದೆ. ಷೋಕಿಗಾಗಿ, ದೈಹಿಕ ಮತ್ತು ಮಾನಸಿಕ ನೋವಿನಿಂದ ಕೆಲ ಕ್ಷಣ ದೂರವಾಗಲು ಇದರ ಬಳಕೆಯಾಗುತ್ತಿದೆ. ಇದಕ್ಕೆ ದಾಸರಾಗುವವರಲ್ಲಿ ಹೆಚ್ಚಿನವರು 18 ರಿಂದ 30 ವರ್ಷದೊಳಗಿನವರು. ಜಗತ್ತಿನೆಲ್ಲೆಡೆ ಸುಮಾರು 500 ಬಿಲಿಯನ್ ಮೊತ್ತದ ಮಾದಕ ವಸ್ತುಗಳ ವಹಿವಾಟು ನಡೆಯುತ್ತದೆ. ಪೆಟ್ರೋಲಿಯಂ ಮತ್ತು ಶಸ್ತ್ರಾಸ್ತ್ರ ಉದ್ದಿಮೆಯ ನಂತರದ ಸ್ಥಾನ ದಕ್ಕಿದೆ! ಪ್ರತಿಷ್ಠೆ ಎಂದುಕೊಂಡಿರುವ ಯುವ ಜನಾಂಗದ ಮೊಂಡುತನ, ಸಾವಿನ ಬಾಗಿಲು ತಟ್ಟುವಂತೆಯೂ ಮಾಡಿದೆ. ದೇಶದಲ್ಲಿ ಸುಮಾರು ಒಂದು ಕೋಟಿ ಹೆರಾಯಿನ್ ವ್ಯಸನಿಗಳಿದ್ದಾರೆ. ಕೆಲ ತಿಂಗಳ ಹಿಂದೆ, ಮಂಗಳೂರಿನ ವಿದ್ಯಾರ್ಥಿನಿಯೋರ್ವಳು ಈ ದುಷ್ಚಟಕ್ಕೆ ಬಲಿಯಾದ ಘಟನೆ ನಮ್ಮ ಮುಂದಿದೆ. ನೆರೆಯ ಪಾಕಿಸ್ತಾನದಿಂದ ಇದರ ವ್ಯವಸ್ಥಿತ ಸರಬರಾಜು ನಡೆಯುತ್ತಿದೆ ಎಂಬ ಗುಮಾನಿಯೂ ಇದೆ. ಅದರಲ್ಲೂ ಕರಾವಳಿ ಪ್ರದೇಶ ವಾಮಮಾರ್ಗ ಕರುಣಿಸಿ ಡ್ರಗ್ ಮಾಫಿಯಾಕ್ಕೆ ತೆರೆದುಕೊಂಡಿದೆ. ಹಾಗಿದ್ದರೆ, ಡ್ರಗ್ಸ್ ಅಥವಾ ಮಾದಕ ವಸ್ತುಗಳ ಕುರಿತಾದ ಪಕ್ಷಿ ನೋಟ ಇಲ್ಲಿದೆ. ಮಾನಸಿಕ ಮತ್ತು ದೈಹಿಕ ಬದಲಾವಣೆಗೆ ಕಾರಣವಾಗುವ ವಸ್ತುಗಳಿಗೆ ಮಾದಕ ವಸ್ತು ಎನ್ನಲಾಗುತ್ತದೆ. ಇದು ಘನ, ದ್ರವ ಅಥವಾ ಅನಿಲ ರೂಪದಲ್ಲಿರುತ್ತದೆ. ವ್ಯಕ್ತಿಯ ನರಮಂಡಲದ ಮೇಲೆ ಪ್ರಭಾವ ಬೀರುವ ಮೂರು ಮುಖ್ಯ ಮಾದಕ ವಸ್ತುಗಳ ವಿಧಗಳು: ಡಿಪ...