ಧೂಮಪಾನ, ಮದ್ಯಪಾನದಂತೆ ಮಾದಕ ದ್ರವ್ಯ ಸೇವನೆಯ ಚಟ ಹೊಸ ತಲೆಮಾರಿನ ಯುವಕ/ಯುವತಿಯರಲ್ಲಿ ವಿದೇಶಿ
ಮೋಹದಂತೆ ಸದ್ದಿಲ್ಲದೆ ಹರಡುತ್ತಿದೆ. ಷೋಕಿಗಾಗಿ, ದೈಹಿಕ ಮತ್ತು ಮಾನಸಿಕ ನೋವಿನಿಂದ ಕೆಲ ಕ್ಷಣ ದೂರವಾಗಲು
ಇದರ ಬಳಕೆಯಾಗುತ್ತಿದೆ. ಇದಕ್ಕೆ ದಾಸರಾಗುವವರಲ್ಲಿ ಹೆಚ್ಚಿನವರು 18 ರಿಂದ 30 ವರ್ಷದೊಳಗಿನವರು. ಜಗತ್ತಿನೆಲ್ಲೆಡೆ
ಸುಮಾರು 500 ಬಿಲಿಯನ್ ಮೊತ್ತದ ಮಾದಕ ವಸ್ತುಗಳ ವಹಿವಾಟು ನಡೆಯುತ್ತದೆ. ಪೆಟ್ರೋಲಿಯಂ ಮತ್ತು ಶಸ್ತ್ರಾಸ್ತ್ರ
ಉದ್ದಿಮೆಯ ನಂತರದ ಸ್ಥಾನ ದಕ್ಕಿದೆ! ಪ್ರತಿಷ್ಠೆ ಎಂದುಕೊಂಡಿರುವ ಯುವ ಜನಾಂಗದ ಮೊಂಡುತನ, ಸಾವಿನ ಬಾಗಿಲು
ತಟ್ಟುವಂತೆಯೂ ಮಾಡಿದೆ. ದೇಶದಲ್ಲಿ ಸುಮಾರು ಒಂದು ಕೋಟಿ ಹೆರಾಯಿನ್ ವ್ಯಸನಿಗಳಿದ್ದಾರೆ. ಕೆಲ ತಿಂಗಳ
ಹಿಂದೆ, ಮಂಗಳೂರಿನ ವಿದ್ಯಾರ್ಥಿನಿಯೋರ್ವಳು ಈ ದುಷ್ಚಟಕ್ಕೆ ಬಲಿಯಾದ ಘಟನೆ ನಮ್ಮ ಮುಂದಿದೆ. ನೆರೆಯ
ಪಾಕಿಸ್ತಾನದಿಂದ ಇದರ ವ್ಯವಸ್ಥಿತ ಸರಬರಾಜು ನಡೆಯುತ್ತಿದೆ ಎಂಬ ಗುಮಾನಿಯೂ ಇದೆ. ಅದರಲ್ಲೂ ಕರಾವಳಿ
ಪ್ರದೇಶ ವಾಮಮಾರ್ಗ ಕರುಣಿಸಿ ಡ್ರಗ್ ಮಾಫಿಯಾಕ್ಕೆ ತೆರೆದುಕೊಂಡಿದೆ. ಹಾಗಿದ್ದರೆ, ಡ್ರಗ್ಸ್ ಅಥವಾ
ಮಾದಕ ವಸ್ತುಗಳ ಕುರಿತಾದ ಪಕ್ಷಿ ನೋಟ ಇಲ್ಲಿದೆ.
ಮಾನಸಿಕ ಮತ್ತು ದೈಹಿಕ ಬದಲಾವಣೆಗೆ ಕಾರಣವಾಗುವ ವಸ್ತುಗಳಿಗೆ ಮಾದಕ ವಸ್ತು ಎನ್ನಲಾಗುತ್ತದೆ.
ಇದು ಘನ, ದ್ರವ ಅಥವಾ ಅನಿಲ ರೂಪದಲ್ಲಿರುತ್ತದೆ.
ವ್ಯಕ್ತಿಯ ನರಮಂಡಲದ ಮೇಲೆ ಪ್ರಭಾವ
ಬೀರುವ ಮೂರು ಮುಖ್ಯ ಮಾದಕ ವಸ್ತುಗಳ ವಿಧಗಳು:
- ಡಿಪ್ರೆಸಾನ್ಟ್ಸ್
(Depressants)
ಡಿಪ್ರೆಸಾನ್ಟ್ಸ್ ವ್ಯಕ್ತಿಯ ಪ್ರಚೋದನೆಗೆ ತಕ್ಕ ಪ್ರತಿಕ್ರಿಯೆ ಕೊಡುವ ಸಾಮಾರ್ಥ್ಯವನ್ನು
ಕುಗ್ಗಿಸುತ್ತವೆ. ಇದರ ಹೆಚ್ಚು ಸೇವನೆ ವಾಂತಿ ಮತ್ತು ಪ್ರಜ್ಞೆ ತಪ್ಪುವಂತೆಯೂ ಮಾಡಬಹುದು.
ಕೆಲವು ಡಿಪ್ರೆಸಾನ್ಟ್ಸ್: ಶರಾಬು, ಕಾನಬಿಸ್, ಹೆರಾಯಿನ್, ಮೊರ್ಫಿನ್.
- ಸ್ಟಿಮ್ಯುಲೆಂಟ್ಸ್
(Stimulants)
ಸ್ಟಿಮ್ಯುಲೆಂಟ್ಸ್ ಮೆದುಳನ್ನು ಚುರುಕಾಗಿಡುತ್ತವೆ. ಅಂದರೆ ಇದರ ಸೇವನೆಯಿಂದ ವ್ಯಕ್ತಿ ಬಹಳ
ಎಚ್ಚರದಿಂದ ಮತ್ತು ಜಾಗೃತವಾಗಿರುತ್ತಾನೆ. ಆದರೆ ಇವು ಹೃದಯ ಬಡಿತ, ದೇಹದ ತಾಪ ಮತ್ತು ರಕ್ತದೊತ್ತಡ
ಹೆಚ್ಚಿಸುತ್ತವೆ. ಅಲ್ಲದೇ, ಹಸಿವು ಮತ್ತು ನಿದ್ರೆಯನ್ನು ಕುಂಠಿತಗೊಳಿಸುತ್ತವೆ. ಇದರ ಅಧಿಕ ಸೇವನೆ
ಹೊಟ್ಟೆ ನೋವು, ತಲೆ ನೋವು ಮತ್ತು ಉದ್ವೇಗಕ್ಕೆ ಕಾರಣವಾಗುತ್ತದೆ.
ಕೆಲವು ಸ್ಟಿಮ್ಯುಲೆಂಟ್ಸ್ : ಕೆಫಿನ್ (ಟೀ, ಕಾಫಿ, ತಂಪು ಪಾನೀಯ), ನಿಕೊಟಿನ್ (ಸಿಗರೇಟ್),
ಕೊಕೆನ್, ಡ್ಯುರೊಮೈನ್ (ತೆಳ್ಳಗಾಗಲು ಕೊಡುವ ಮಾತ್ರೆಗಳಲ್ಲಿ).
- ಹಲುಸಿನೊಜೆನ್ಸ್
(Hallucinogens)
ಹಲುಸಿನೊಜೆನ್ಸ್ ವ್ಯಕ್ತಿಯ ನೋಟ ಮತ್ತು ಗ್ರಹಿಕೆಯ ಮೇಲೆ ಪರಿಣಾಮ ಬೀರುತ್ತವೆ. ಇದರ ವ್ಯಸನದಿಂದ
ತಾನು ಕಂಡ ದೃಶ್ಯ ಅಥವಾ ಕೇಳಿದ ಶಬ್ದ ಕೇವಲ ಭ್ರಮೆಯಾಗಿರುವ ಸಾಧ್ಯತೆಗಳಿವೆ. ಇದಲ್ಲದೇ, ಹಸಿವು ಇಲ್ಲದಂತಾಗುವುದು,
ಅಸಹಜ ಮಾತು-ನಗು, ಮಾನಸಿಕ ಅಥವಾ ಭಾವನಾತ್ಮಕವಾಗಿ ದೃಢವಿರುವ ನಂಬಿಕೆಯನ್ನು ಉಂಟುಮಾಡುತ್ತವೆ.
ಕೆಲವು ಹಲುಸಿನೊಜೆನ್ಸ್ : ಕೆಟಮೈನ್ ಮತ್ತು ಪಿಸಿಪಿ (ಅನಸ್ತೇಶಿಯಾ), ಎಲ್ ಎಸ್ ಡಿ.
ಬಳಕೆಯ ಮೂರು ರೀತಿಗಳು:
- ಪ್ರಯೋಗಾರ್ಥವಾಗಿ: ಮಾದಕ ವಸ್ತುವಿನ ಬಗೆಗಿನ ಕುತೂಹಲ ತಣಿಸುವುದಕ್ಕಾಗಿ ಬಳಸುತ್ತಾರೆ.
ದೇಹವು ಮೊದಲ ಹಂತದಲ್ಲಿ ಒಗ್ಗದೇ ಇರುವುದರಿಂದ ಹೆಚ್ಚು ಹಾನಿಯಾಗುವುದಿಲ್ಲ.
- ಮೋಜಿಗಾಗಿ: ಮನಸ್ಸು ಹಗುರ ಮಾಡಿಕೊಳ್ಳಲು, ಆನಂದದಿಂದಿರಲು ಸ್ನೇಹಿತರು-ಸಹೋದ್ಯೋಗಿಗಳು
ಒಟ್ಟು ಸೇರಿದಾಗ ಉಪಯೋಗಿಸುತ್ತಾರೆ.
- ಸಂದರ್ಭೋಚಿತವಾಗಿ: ಕ್ರೀಡಾಳುಗಳು ತಮ್ಮ ಸಾಮರ್ಥ್ಯ ಬಲಪಡಿಸಲು, ಟ್ರಕ್ ಡ್ರೈವರ್ ಗಳು ನಿದ್ರೆಗೆ ಜಾರದಂತೆ ಎಚ್ಚರವಹಿಸಲು ಮಾದಕ ವಸ್ತುವನ್ನು ಬೇಡಿಕೆಗೆ ಅನುಗುಣವಾಗಿ ಬಳಸುತ್ತಾರೆ.
ಅವಲಂಬನೆಯ ಕಾರಣಗಳು ಮತ್ತು
ಪರಿಣಾಮಗಳು:
ಮಾದಕ ವಸ್ತುಗಳ ಸೇವನೆಗೆ ಒಳಗಾದ ವ್ಯಕ್ತಿಯಲ್ಲಿ ಅದನ್ನು ಎದುರಿಸುವ ಧಾರಣ ಶಕ್ತಿಯೂ ಬೆಳೆದಿರುತ್ತದೆ.
ಮಾನಸಿಕವಾಗಿ ಒಗ್ಗಿರುವವರು ತಾವು ಕ್ರಿಯಾಶೀಲರಾಗಿರಲು ಇವುಗಳೇ ಕಾರಣವೆಂದುಕೊಳ್ಳುತ್ತಾರೆ. ಇಂತಹವರು
ಈ ವ್ಯಸನದಿಂದ ಮುಕ್ತರಾಗಲು ಬಯಸಿದರೂ, ದೇಹ ಹಿಂದಿನ ಸಹಜ ಸ್ಥಿತಿಗೆ ಬರಲು ಕಷ್ಟಪಡುತ್ತದೆ. ಅಲ್ಲದೇ,
ಮಾನಸಿಕ ಬಳಲಿಕೆ, ನಿದ್ರಾಹೀನತೆ, ಪಿತ್ತದ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ವ್ಯಸನ ಮುಕ್ತರಾಗಲು
ನಿರ್ದಿಷ್ಟ ಚಿಕಿತ್ಸೆಯೆಂಬುದಿಲ್ಲ.
ಮಾದಕ ದ್ರವ್ಯ ವ್ಯಸನದ ಹಿಂದೆ ಸಾಮಾಜಿಕ, ಸಾಂಸ್ಕೃತಿಕ ಮತ್ತು ಆರ್ಥಿಕ ಅಂಶಗಳು ಅಡಕವಾಗಿವೆ.
ಇದಲ್ಲದೇ, ಒಡೆದ ಅವಿಭಕ್ತ ಕುಟುಂಬಗಳು, ಹೆತ್ತವರ ಪ್ರೀತಿ-ಸಲಹೆಗಳ ಅಭಾವ, ಬಿಡುವಿಲ್ಲದ ಕೆಲಸದ ಒತ್ತಡ,
ಆಧುನಿಕತೆಗೆ ಮಾರು ಹೋಗುವ ಭರಾಟೆಯಲ್ಲಿ ನೈತಿಕ ಮೌಲ್ಯಗಳು
ಮೂಲೆ ಗುಂಪಾಗುತ್ತಿರುವುದು ಮೊದಲಾದ ಕಾರಣಗಳು ಈ ಕೆಟ್ಟ ವ್ಯಸನಕ್ಕೆ ಎಡೆ ಮಾಡಿಕೊಡುತ್ತಿದೆ. ಕೈಗಾರೀಕರಣ,
ನಗರೀಕರಣದಿಂದಾಗಿ ಉದ್ಯೋಗ ನಿಮಿತ್ತ ವಲಸೆ ಹೋಗುವ ಜನ ಸಾಮಾಜಿಕ ಬದ್ಧತೆಗಳಿಂದ ದೂರವಾಗುತ್ತಾರೆ. ಒಂಟಿ
ಎನ್ನಿಸುವ ಜೀವನದಲ್ಲಿ ವ್ಯಸನಗಳ ಹಾದಿ ಹಿಡಿಯುತ್ತಾರೆ. ಮಾದಕ ವಸ್ತುಗಳಿಗಾಗಿ ಅನೇಕ ಕೊಲೆ-ಸುಲಿಗೆಗಳು
ನಡೆಯುತ್ತವೆ. ಅಲ್ಲದೇ, ದುಶ್ಚಟಕ್ಕೆ ಒಳಗಾದವರ ಕುಟುಂಬಗಳು ಆರ್ಥಿಕ ಹಿನ್ನಡೆಯ ಜೊತೆ, ಮಾನಸಿಕ ಹಿಂಸೆ ಅನುಭವಿಸುವಂತಾಗಿದೆ.
ಯುವ ಜನಾಂಗವೇ ಹೆಚ್ಚು ಚಟ ಬೆಳೆಸಿಕೊಂಡಿರುವುದರಿಂದ ಇವರಲ್ಲಿ ಮಾನಸಿಕ, ದೈಹಿಕ ಮತ್ತು ಮೌಲಿಕ ಬೆಳವಣಿಗೆಗಳು
ಕುಂಠಿತವಾಗುತ್ತಿವೆ. ಹೆಚ್.ಐ.ವಿ., ಹೆಪಾಟೈಟಿಸ್ ಬಿ, ಹೆಪಾಟೈಟಿಸ್ ಸಿ ಮತ್ತು ಅಸ್ತಮಾದಂತಹ ಕಾಯಿಲೆಗಳು
ಮಾದಕ ವಸ್ತುಗಳ ಸೇವನೆಯಿಂದ ಬರುವ ಸಾಧ್ಯತೆಗಳು ದಟ್ಟವಾಗಿವೆ.
ಮಾದಕ ದ್ರವ್ಯ ಸೇವನೆ ಮತ್ತು ಸಾಗಾಟ ತಡೆಗಟ್ಟಲು ಸರ್ಕಾರ ಕ್ರಮ ಕೈಗೊಳ್ಳಬೇಕಾಗಿದೆ. ವಿವಿಧ
ಸಂಘಟನೆಗಳ ಸಹಾಯ ಪಡೆದು ಶಿಕ್ಷಣ ,ಚಿಕಿತ್ಸೆ ಮತ್ತು ಕಾನೂನು ಸಲಹೆಯ ಮೂಲಕ ಜಾಗೃತಿ ಉಂಟು ಮಾಡುವ ಪ್ರಕ್ರಿಯೆ
ನಡೆಯಬೇಕಿದೆ. ಈ ಸಲುವಾಗಿ ಪಾಕಿಸ್ತಾನ, ಬರ್ಮಾ ಒಳಗೊಳಡಂತೆ ಒಟ್ಟು 13 ದೇಶಗಳ ಜೊತೆ ಭಾರತವು ದ್ವಿಪಕ್ಷೀಯ
ಒಪ್ಪಂದಕ್ಕೆ ಸಹಿ ಹಾಕಿದೆ. ಒಪಿಯಂ ಕಾಯ್ದೆ (1857), ಒಪಿಯಂ ಕಾಯ್ದೆ (1878) ಮತ್ತು ಮಾದಕ ವಸ್ತು
ನಿಗ್ರಹ ಕಾಯ್ದೆ (1930) ಗಳನ್ನು ಜಾರಿಗೊಳಿಸಲಾಗಿದೆಯಾದರೂ ಪರಿಣಾಮಿಕಾರಿಯಾಗಿಲ್ಲ.
(ಕೃಪೆ: ಸುದ್ದಿ ಬಿಡುಗಡೆ )

ದೀವಟಿಗೆ by ಸಂದೀಪ ಫಡ್ಕೆ, ಮುಂಡಾಜೆ is licensed under a Creative Commons Attribution-NonCommercial-NoDerivs 2.5 India License
(ಕೃಪೆ: ಸುದ್ದಿ ಬಿಡುಗಡೆ )
ದೀವಟಿಗೆ by ಸಂದೀಪ ಫಡ್ಕೆ, ಮುಂಡಾಜೆ is licensed under a Creative Commons Attribution-NonCommercial-NoDerivs 2.5 India License
Comments