Skip to main content

ವ್ಯವಸ್ಥೆ ಬದಲಾಗಬೇಕಿದೆ






ಮಾಜದ ನಾನಾ ಸ್ತರದ ಜನರ ಜೊತೆ ಒಡನಾಟ ಮತ್ತು ಬಾಂಧವ್ಯ ವೃದ್ಧಿಗೆ ಸಹಾಯವಾಗುವ ಆದರ್ಶ ಗುಣಗಳು ಪ್ರಕೃತಿದತ್ತವಾಗಿ ಸಿಗುವ ವಸ್ತುಗಳೇನೂ ಅಲ್ಲ. ಅಥವಾ ಹುಟ್ಟು ಗುಣವಾಗಿಯೂ ಬರುವಂಥದಲ್ಲ. ಈ ದೇಶದಲ್ಲಿ ಆದರ್ಶ ಪ್ರಾಯರಾಗಿ ಬಾಳಿ ಬದುಕಿದವರ ಸಂಖ್ಯೆಯೂ ತುಂಬಾ ದೊಡ್ಡದಿದೆ. ಆದರೆ ಪ್ರಸ್ತುತ, ಸತ್ಪ್ರಜೆಯಾಗಿ ಉಳಿಯುವುದು ಕಷ್ಟವಾಗುತ್ತಿದೆ. ಹದಗೆಟ್ಟ ಪ್ರಜಾಸತಾತ್ಮಕ ವ್ಯವಸ್ಥೆ, ಅರಾಜಕೀಯತೆ ಒಳ್ಳೆಯವರನ್ನೂ ಕತ್ತಲಿಗೆ ತಳ್ಳುತ್ತಿದೆ. ಸುಲಭ, ಸಸೂತ್ರ ಮತ್ತು ಪಾರದರ್ಶಕತೆ ಕಲ್ಪಿಸಲಿರುವ ವ್ಯವಸ್ಥೆಗಳು ವ್ಯಕ್ತಿ-ಅಭಿಪ್ರಾಯ-ಅಭಿರುಚಿಗೆ ಸಿಲುಕಿ ಕ್ಷೀಣವಾಗಿ ಹೋಗಿವೆ. ಒಟ್ಟು ಸಮಾಜವನ್ನು ಸರಿ ದಾರಿಯಲ್ಲಿ ಕೊಂಡೊಯ್ಯಬೇಕಾದವರೇ ಅಡ್ಡದಾರಿ ಹಿಡಿಯುತ್ತಿರುವುದು ದುರಂತ.

ನಾವು ಭಾರತೀಯರೆಂದು ಭಾಷಣ ಬಿಗಿಯುವಾಗ ಎದೆ ತಟ್ಟಿ ಹೇಳಿ ಕೊಳ್ಳುತ್ತೇವೆಯಾದರೂ, ನಮ್ಮಲ್ಲಿ ಒಂದು ಕೀಳರಿಮೆ ಇದ್ದೇ ಇದೆ. ಸಮಯ ಪ್ರಜ್ಞೆ, ಕಾಲೆಳೆಯುವುದು, ಯಶಸ್ಸು ಮತ್ತು ಸಾಧನೆಗಳನ್ನು ಪ್ರೊತ್ಸಾಹಿಸದೇ ಇರುವಂತಹ ಅನೇಕ ನಡೆಗಳು ನಮ್ಮೊಳಗೆ ತಾನಾಗಿಯೇ ಬೆಳೆದು ಬಿಟ್ಟಿದೆ. ಈ ಕುರಿತಾದ ಚರ್ಚೆಗಳಲ್ಲೆಲ್ಲಾ ಅಂತಿಮವಾಗಿ ಶಿಕ್ಷಣದ ಕೊರತೆಯಿದೆ ಎಂಬ ನಿರ್ಧಾರಕ್ಕೆ ಬರಲಾಗುತ್ತದೆ. ಆದರೆ ನಾಗರಿಕ ಜೀವನ ನಡೆಸಲು ಶಿಕ್ಷಣದ ಜೊತೆಗೆ ಕಾನೂನು ಮತ್ತು ಸಾಮಾಜಿಕ ವ್ಯವಸ್ಥೆಗಳು ಸರಿಯಾದ ರೀತಿಯಲ್ಲಿ ಜಾರಿಗೆ ಬರಬೇಕಿದೆ. ನಿಜಕ್ಕೂ ಭಾರತದಲ್ಲಿ ಈ ಕುರಿತಾದ ಸಮಗ್ರ ವಿಮರ್ಶೆಯ ಅನಿವಾರ್ಯತೆಯಿದೆ. ಬೇಲಿಯೇ ಎದ್ದು ಹೊಲ ಮೇಯುತ್ತಿರುವಾಗ, ಜನರ ಮನಸ್ಥಿತಿಯೂ ಬಿಗಡಾಯಿಸುವುದು ಸಹಜ. ಇಲ್ಲ-ಸಲ್ಲದ ವಿಚಾರಗಳಿಗೆ ನಡೆಯುವ ವಾಗ್ವಾದ, ಹಾಳು ರಾಜಕೀಯ, ಅಮಾನುಷ ಕೃತ್ಯಗಳು ಇಡೀ ವ್ಯವಸ್ಥೆಯನ್ನೇ ಬುಡಮೇಲು ಮಾಡಿರುವಾಗ ನ್ಯಾಯ-ಧರ್ಮದಿಂದ ನಡೆಯುವವರಿಗೆ ಹೇಗಾಗುವುದು ಬೇಡ?

ದೇಶದ ಹಿರಿಮೆಯನ್ನು ಸಾಂಕೇತಿಕವಾಗಿ ಪ್ರದರ್ಶಿಸುವ ಶಿಸ್ತು, ಸಂಯಮ ಮತ್ತು ಸಮರ್ಪಣಾ ಭಾವದ ಅಭಾವ ಎದುರಾಗಿದೆ. ದೇಶವನ್ನೇ ಕೊಳ್ಳೆಹೊಡೆಯುವ, ಭಯೋತ್ಪಾದಕರಿಗೆ ಆಶ್ರಯಿಸುವ, ಹಲವು ಅಕ್ರಮಗಳಿಗೆ ನೆರವು ನೀಡುವ ಶಕ್ತಿಗಳು ಉದ್ಭವವಾಗಿವೆ. ಕೇವಲ ಸಾಮಾನ್ಯ ಪ್ರಜೆಯ ಮೇಲಷ್ಟೇ ಹೊರೆಸುವ ರಾಶಿ-ರಾಶಿ ಕಾನೂನುಗಳು, ಪ್ರಭಾವಿ ವಲಯದ ಹತ್ತಿರವೂ ಸುಳಿಯದಿರುವುದು ಅನ್ಯಾಯದ ವಿರುದ್ಧ ನಡೆಯುವ ಎಲ್ಲ ಕಸರತ್ತುಗಳಿಗೆ ಅವಮಾನಿಸಿದಂತೆಯೇ ಅಲ್ಲವೆ? ಜನರು ತಮ್ಮ ಆಶೋತ್ತರಗಳನ್ನು ಮುಂದಿಟ್ಟ ಮೇಲೆ, ಸರಿಯಾದ ವ್ಯವಸ್ಥೆ ಕಲ್ಪಿಸದೇ ಇದ್ದಾಗ ಉಗ್ರ ರೂಪ  ಪಡೆದು ಹರತಾಳಗಳು ನಡೆಯುವುದು ಸಾಮಾನ್ಯ. ಹಾಗೆಂದು ಇದನ್ನೇ ನೆಪವಾಗಿಟ್ಟುಕೊಂಡು ದಬ್ಬಾಳಿಕೆ ನಡೆಸುವ ಕ್ರೂರತನ ದೇಶದ ಘನತೆಗೆ ಕಪ್ಪು ಚುಕ್ಕೆಯಾಗಿ ಪರಿಣಮಿಸಿದೆ. ಪ್ರಾಮಾಣಿಕ ಪ್ರಯತ್ನದ ಕಡೆ ಮುಖ ಮಾಡದೇ ಇರುವ ವ್ಯವಸ್ಥೆಗೆ ಯಾರು ಹೊಣೆ? ಜನ ಜಾಗೃತಿ ಮೂಡಿಸುವುದು ದೊಡ್ಡ ವಿಷಯವಲ್ಲ. ಪ್ರತಿಯೊಬ್ಬರೂ ತಮ್ಮ ಮತ್ತು ಸುತ್ತಲ ಸಮಾಜದ ಒಳಿತನ್ನು ಬಯಸಿದಾಗ ಅರ್ಥಪೂರ್ಣ ವ್ಯವಸ್ಥೆಯೊಂದರ ನಿರ್ಮಾಣ ಕಷ್ಟ ಸಾಧ್ಯವಲ್ಲ. ಜನ ಸೇವೆ ಮಾಡಲೆಂದು ಮುಂದೆ ಬಂದವರನ್ನು ಆರಿಸಿ ಅಧಿಕಾರ ಕೊಟ್ಟಾಗ, ಮೊಸಳೆ ಕಣ್ಣೀರು ಇಡುತ್ತಾರೆಯೆ ಹೊರತು ಜನ ಸ್ಪಂದನ ಅಷ್ಟಕಷ್ಟೆ. ಕಾನೂನು ಪಾಲನೆಯಲ್ಲಿ ಜನರು ಅಸಡ್ಡೆ ತೋರಿಸಲು ಇದೇ ಕಾರಣ. ಸಾರ್ವಜನಿಕ ಸ್ಥಳಗಳಲ್ಲಿ ಇರಬೇಕಾದ ಮೂಲಭೂತ ಸೌಕರ್ಯಗಳ ಪೂರೈಕೆ ಮತ್ತು ನಿರ್ವಹಣೆ ಆಗದೇ ಇದ್ದಾಗ, ಅದನ್ನು ಉಪಯೋಗಿಸುವವರೂ ನಿರ್ಲಕ್ಷ ತೋರುತ್ತಾರೆ. ಹೀಗೆ ಯಾವುದೂ ಸುಸ್ಥಿತಿಯಲ್ಲಿರದೆ ಅಹಿತಕರ ವಾತಾವರಣ ನಿರ್ಮಾಣವಾಗುತ್ತದೆ. ವಿದೇಶದಲ್ಲಾದರೆ ಹಾಗಿರುತ್ತದೆ, ಹೀಗಿರುತ್ತದೆಂದು ನಮ್ಮನ್ನೇ ನಾವು ತುಚ್ಛವಾಗಿ ನೋಡುವುದು ಕೊನೆಯಾಗಬೇಕು. ನಾವೇ ಮಾಡಿಕೊಂಡಿರುವ ವ್ಯವಸ್ಥೆಯ ಲೋಪ-ದೋಷಗಳು ನಿವಾರಣೆಯಾಗುವವರೆಗೆ ಉತ್ತಮ ಆಡಳಿತ ನಿರೀಕ್ಷಿಸಲಾಗದು.

ಯುವ ಜನತೆ ನಾನಾ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವಂತೆ ಉತ್ತೇಜನ ನೀಡುವುದು ಸ್ವಾಗತಾರ್ಹ. ಈಗಿರುವ ವ್ಯವಸ್ಥೆಯಲ್ಲಿ ಪರಿವರ್ತನೆ ತರಲು ಮುಂದಾಳುಗಳು ಬೇಕು. ಹಾಗಂತ ಕನಿಷ್ಟ ಅರ್ಹತೆ ಮತ್ತು ಅನುಭವಗಳನ್ನು ಬದಿಗೊತ್ತುವುದು ಸರಿಯಲ್ಲ. ಈಗಲೂ ಕುಟುಂಬ ರಾಜಕಾರಣ ನಡೆಯುತ್ತಿರುವುದು ನಾಚಿಕೆಗೇಡು. ಕೇವಲ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ರಾಜಕೀಯ ಕಪಟ ನಾಟಕಗಳು ತರಹೇವಾರಿಯಾಗಿ ನಡೆಯುತ್ತಿವೆ. ಹೀಗೆ ಅವಕಾಶವಾದಿಗಳ ಲೆಕ್ಕಾಚಾರಗಳು ದೇಶವನ್ನು ಅತಂತ್ರ ಸ್ಥಿತಿಗೆ ತಂದೊಡ್ಡುತ್ತಿದೆ. ಬಹುಮತ ಸಾಧಿಸಲು ಭರವಸೆಗಳ ಮಹಾಪೂರವೇ ಹರಿಸಿ, ನಂತರ ಕಣ್ಣಿಗೆ ಮಣ್ಣೆರಚುವ ಭ್ರಷ್ಟ ವ್ಯವಸ್ಥೆಗೆ ಕೊನೆಯಾಗಬೇಕು. ಪಕ್ಷಾತೀತವಾಗಿ ರಾಜಕಾರಣ ಮಾಡಿ, ಕಾನೂನಿನ ತಹಬಂದಿಯೊಳಗೆ ಸಾಮಾಜಿಕ ಕಳಕಳಿಯಿರುವ ಮಾದರಿ ವ್ಯವಸ್ಥೆಯೊಂದು ಎದ್ದು ನಿಲ್ಲಬೇಕಿದೆ.

ಕೃಪೆ: ಸುದ್ದಿ ಬಿಡುಗಡೆ,ಬೆಳ್ತಂಗಡಿ 


Creative Commons License
ದೀವಟಿಗೆ by ಸಂದೀಪ ಫಡ್ಕೆ, ಮುಂಡಾಜೆ is licensed under a Creative Commons Attribution-NonCommercial-NoDerivs 2.5 India License

Comments

Popular posts from this blog

ಯುವ ಜನತೆ ಮತ್ತು ಸಾಮಾಜಿಕ ತಾಣಗಳು

        ಸಂ ಪರ್ಕ ಮಾಧ್ಯಮಗಳು ಒಂದೆರಡಲ್ಲ,ಹಲವು ಬಗೆಯವು.ಅನಾದಿಕಾಲದಿಂದಲೂ ಇಂತಹ ಮಾಧ್ಯಮಗಳು ಜಾರಿಯಲ್ಲಿವೆ. ಕಾಲ ಬದಲಾದಂತೆ ಶೀಘ್ರ ಸಂಪರ್ಕ ಕಲ್ಪಿಸಬಹುದಾದ ಸಾಧನಗಳು ಬರಲಾರಂಭಿಸಿದವು.ಇಂದಿನ ಈ-ಮೇಲ್,ಸಾಮಾಜಿಕ ತಾಣಗಳು (ಫೇಸ್ ಬುಕ್,ಟ್ವಿಟ್ಟರ್..) ಪ್ರಚಲಿತ ಸಾಧನಗಳು.ಆದರೆ ಸಾಂಪ್ರದಾಯಿಕ ಪತ್ರ ವ್ಯವಹಾರಕ್ಕೆ ಇದ್ದ ಗೈರತ್ತು ಈ ಮಾಧ್ಯಮಗಳಲ್ಲಿ ಕಾಣುವುದು ಕಷ್ಟ.ಆದರೆ ಹೊಸತನಕ್ಕೆ ಅಂಟಿಕೊಳ್ಳುವ ಅನಿವಾರ್ಯತೆ ಬೇರೆಯದೇ ಪ್ರಪಂಚಕ್ಕೆ ಕರೆದೊಯ್ಯುತ್ತವೆ.ಎಲ್ಲೋ-ಎಂದೋ ಭೇಟಿಯಾದವರು, ಯಾವುದೋ ಊರಿನಲ್ಲಿರುವವರು ಹೀಗೆ ಹತ್ತು ಹಲವು ಕಾರಣಗಳಿಂದ ದೂರವಾದವರನ್ನು ಹತ್ತಿರಕ್ಕೆ,ಸದಾ ಸಂಪರ್ಕದಲ್ಲಿರುವಂತೆ ಮಾಡುವ ಛಾತಿ ಸಾಮಾಜಿಕ ತಾಣಗಳಂತಹ ಅಂತರ್ಜಾಲ ಸಂಬಂಧಿ ವ್ಯವಸ್ಥೆಗಳಿಗಿವೆ.ವಯಸ್ಸಿನ ಅಂತರವಿಲ್ಲದೇ ಎಲ್ಲರನ್ನು ಆಕರ್ಷಿಸುವ ತಾಣಗಳು ಮನೆ-ಮನಗಳಲ್ಲಿ ಹಸುರಾಗಿವೆ.ಇವುಗಳ ಬಳಕೆ ಹೆಚ್ಚಾಗುತ್ತಲೇ ಇದೆ.ಒಂದು ಘಳಿಗೆಯೂ ಬಿಟ್ಟು ಇರಲಾರದಷ್ಟು ಪ್ರಭಾವ ಬೀರಿವೆ.ಭಾರತ ಫೇಸ್ ಬುಕ್ ಬಳಕೆಯಲ್ಲಿ ವಿಶ್ವದಲ್ಲೇ ಮೂರನೇ ಸ್ಥಾನದಲ್ಲಿದೆ.        ಯುವ ಜನಾಂಗ ಈ ತಾಣಗಳ ಅತಿ ಹೆಚ್ಚು ಬಳಕೆ ಮಾಡುತ್ತಿರುವುದು ಗೊತ್ತಿರುವ ವಿಚಾರವೆ.ಗೆಳೆಯರ ಬಳಗ ಕಟ್ಟಿಕೊಳ್ಳುವ ಆಸಕ್ತಿ ಹೆಚ್ಚಿಸುತ್ತಿರುವ ಸಾಮಾಜಿಕ ತಾಣಗಳು ಓದಿನ ಮೇಲಿರಬೇಕಾದ ಗಮನ ಕುಂಠಿತಗೊಳಿಸುತ್ತಿದೆ ಎಂಬ ಅಭಿಪ್ರಾಯಗಳು ಕೇಳಿಬರು...

ಜಾತಿರಾಜಕಾರಣ ಯಾಕೆ ಬೇಕು..?

      ನ ಮ್ಮದು ಜ್ಯಾತ್ಯಾತೀತ ದೇಶ.ಹೀಗೆಂದು ಹೇಳಿಕೊಳ್ಳುವವರಿಗೆ ಲೆಕ್ಕವಿಲ್ಲ.ಆದರೂ,ಅನೇಕ ರೀತಿ-ರಿವಾಜು,ಜಾತಿ-ಧರ್ಮಗಳನ್ನು ಹೊಂದಿರುವ ದೇಶದಲ್ಲಿ ಸಾಮರಸ್ಯ ಕಾಣಬೇಕಾದರೆ ಜ್ಯಾತ್ಯಾತೀತತೆಯ ಕಡೆ ಒಲವು ಮೂಡಿಸುವ ಪ್ರಯತ್ನ ಮಾಡುವ ಅನಿವಾರ್ಯತೆ ಇದೆ.ಸರಳ ನಡೆ-ನುಡಿ,ತಾತ್ವಿಕ ವಿಚಾರಗಳ ಕುರಿತ ಚರ್ಚೆ,ಸಹೋದರತೆಯನ್ನು ಸಾರುವ ಗುಣಗಳನ್ನು ಬೆಳೆಸಿಕೊಳ್ಳುವ ರೂಢಿ ಮಾಡಿಕೊಳ್ಳಬೇಕಿದೆ.ಜನರ ನಡುವೆ ಒಮ್ಮತದ ನಿರ್ಧಾರ ಕೈಗೊಳ್ಳಲು ಪ್ರಯತ್ನಗಳು ಸಾಗಬೇಕಿವೆ.ದಿನೇ-ದಿನೇ ಹೆಚ್ಚುತ್ತಿರುವ ಜನಸಂಖ್ಯೆಯಲ್ಲಿ ಕೆಲವೊಂದು ಜಾತಿ-ಧರ್ಮಕ್ಕೆ ಸೇರಿದವರ ಸಂಖ್ಯೆ ಜಾಸ್ತಿಯಿರಬಹುದು.ಇದರಿಂದ ಸಾಮಾಜಿಕ ಬದಲಾವಣೆಗಳು ಸಾಧ್ಯ.ಹೀಗಾಗಿ ಸಮತೋಲನ ಕಾಯ್ದುಕೊಳ್ಳುವ ಜವಾಬ್ದಾರಿ ಮತ್ತೆ ಜನರದೇ ಆಗಿರುತ್ತದೆ.ಆದರೆ ಇದೆಲ್ಲಕ್ಕೂ ಸಂವಿಧಾನತ್ಮಕ ರೂಪು-ರೇಷೆಗಳಿರುತ್ತವೆ.ಮತದಾನದ ಮೂಲಕ ಆಯ್ಕೆಯಾಗಿರುವ ವ್ಯಕ್ತಿ ಊರಿನ ಪ್ರತಿನಿಧಿಯಾಗಿರುತ್ತಾನೆ.ರಾಜಕೀಯ ಪಕ್ಷಗಳು ಮೊದಲ ಹಂತದಲ್ಲಿ ಜನರನ್ನು ವಿಭಾಗಿಸಿಬಿಡುತ್ತದೆ.ಇಲ್ಲಿ ನಡೆಯುವ ಎಲ್ಲಾ ಲೆಕ್ಕಾಚಾರಗಳು ಜನರ ಹಿತದೃಷ್ಠಿಯಿಂದ ಎಂಬ ಮುಖವಾಡ ಹೊತ್ತಿರುತ್ತದೆಯಲ್ಲದೆ ಅಸಲಿ ಅಂಶ ಬೇರೆಯದೇ ಆಗಿರುತ್ತದೆ.          ರಾಜಕೀಯಕ್ಕೂ ಜಾತಿ-ಧರ್ಮಕ್ಕೂ ಯಾವುದೇ ಸಂಬಂಧವಿಲ್ಲ.ಆದರೆ ಇಂದು ನಡೆಯುತ್ತಿರುವುದೆಲ್ಲ ಜಾತಿ ರಾಜಕಾರಣವೆ.ಇದರ ಬೇರು ವಿಶಾಲವಾಗಿ ಹರಡಿ ನಿಂತಿದೆ.ಮತದಾರರನ್ನು ವಿ...

-: ಮುತ್ತಿನ ಹನಿಗಳು :-

------೧------ ಚುಂ- ಬನಕ್ಕೆ ಲಗ್ಗೆಯಿಡುವ ಯುವ ಜೋಡಿಗಳು ಅದೆಂತಹ ಪ್ರಕೃತಿ ಆರಾಧಕರು..! ------೨------ ಹೂದೋಟದಲ್ಲಿ ಕಾಣದ ಪತಂಗಗಳು ಯಥೇಚ್ಛ ಮಧು ಸವಿಯಲು ಯುವತಿಯರ ಹಿಂದೆ ಬಿದ್ದಿವೆಯಂತೆ..!