ಸಾಧನೆಗೆ ವಯಸ್ಸಿನ ಅಂತರವಿಲ್ಲ.ಹಾಗೆಯೇ
ಸಣ್ಣ ಪ್ರಾಯದಲ್ಲೇ ಅಸಾಧರಣ ಸಾಧನೆ ಮಾಡಿ ಬೆರಗು ಹುಟ್ಟಿಸಿದವರು ನಮ್ಮ ನಡುವೆಯಿದ್ದಾರೆ.ಇವರಲ್ಲಿ
ಅಲ್ಪಾಯುಷಿಗಳೇ ಜಾಸ್ತಿ. ಅವರ ವಿಧಿಯೇ ಹಾಗಿರುತ್ತದೋ ಏನೋ.ಗಣಕ ತಜ್ಞ,ಸಂಘಟಕ ಅರೊನ್ ಸ್ವಾರ್ಟ್ಜ್
ಕೂಡ ಅಂತರ್ಜಾಲ ವ್ಯವಸ್ಥೆಯಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ಸಮರ್ಥವಾಗಿ ಹೋರಾಡಿ,ತನ್ನ 26ನೇ ವಯಸ್ಸಿನಲ್ಲಿ
ಇಹಲೋಕದ ಬದುಕಿಗೆ ಪೂರ್ಣ ವಿರಾಮವಿಟ್ಟು ನೆನಪಾಗಿ ಉಳಿದು ಬಿಟ್ಟಿದ್ದಾನೆ.

2010ರಲ್ಲಿ ಹಾವರ್ಡ್ ವಿವಿಯಲ್ಲಿ
ಸಂಸ್ಥೆಗಳಲ್ಲಿ ನಡೆಯುವ ಭ್ರಷ್ಟಾಚಾರಗಳ ಕುರಿತು ನೀತಿಶಾಸ್ತ್ರದ ಅಧ್ಯಯನ ನಡೆಸಿದ.ಮಾಹಿತಿ ಪೂರೈಕೆಗಾಗಿ
ಹಣದ ಹೊಳೆ ಹರಿಯುವುದನ್ನು ತಡೆಗಟ್ಟಲು ಕಾರ್ಯತಂತ್ರ ರೂಪಿಸಿದ.ಇದಕ್ಕಾಗಿ ಡಿಮಾಂಡ್ ಪ್ರೊಗ್ರೆಸ್(Demand
Progress) ಎಂಬ ಪ್ರಗತಿಶೀಲ ಪ್ರತಿಪಾದನಾ ಸಂಘಟನೆಯನ್ನು ಹುಟ್ಟು ಹಾಕಿದ.ಜನರನ್ನು ಮಿಂಚಂಚೆ ಮತ್ತು
ಮಾಧ್ಯಮಗಳ ಮೂಲಕ ಒಟ್ಟುಗೂಡಿಸಿ ನಿರ್ದಿಷ್ಟ ವಿಚಾರದ ಕುರಿತು ಜಾಗೃತಿ ಮೂಡಿಸುವುದು ಇದರ ಮೂಲ ಧ್ಯೇಯ.ಸಂಯುಕ್ತ
ಸಂಸ್ಥಾನದ ಶಾಸಕಾಂಗ ಪ್ರಸ್ತಾಪಿಸಿದ SOPA(Stop Online Piracy Act) ಮತ್ತು PIPA(PROTECT
IP Act) ಎಂಬ ಎರಡು ಕಾಯ್ದೆಗಳ ವಿರುದ್ಧ ಡಿಮಾಂಡ್ ಪ್ರೊಗ್ರೆಸ್ ಸಿಡಿದೆದ್ದಿತು.ಈ ಕಾಯ್ದೆಗಳ ವಿಧೇಯಕವು
ಅಂತರ್ಜಾಲದಲ್ಲಿನ ಮಾಹಿತಿಗಳ ಮೇಲಿನ ಹಕ್ಕುಸ್ವಾಮ್ಯಗಳನ್ನು ಬಲಪಡಿಸುವ ಮತ್ತು ಕೃತಿಚೌರ್ಯದ ಉಲ್ಲಂಘನೆಯನ್ನು
ಹತ್ತಿಕ್ಕುವ ಉದ್ದೇಶ ಹೊಂದಿತ್ತು.ಆದರೆ ಅಂತರ್ಜಾಲಕ್ಕೆ ಇಷ್ಟೊಂದು ನಿರ್ಬಂಧಗಳನ್ನು ಹೇರಿದರೆ ಜನ
ಸ್ನೇಹಿಯಾಗಿ ಉಳಿಯುವುದು ಕಷ್ಟ ಮತ್ತು ನ್ಯಾಯ ಸಮ್ಮತವೂ ಅಲ್ಲವೆಂಬ ವಾದಕ್ಕೆ ಪೂರ್ಣ ಬಹುಮತ ಸಿಕ್ಕಿತು.ಕಳೆದ
ವರ್ಷ ಜನವರಿ 18ರಂದು ಕಾಯ್ದೆ ಖಂಡಿಸಿ ಸರಣಿ ಪ್ರತಿಭಟನೆಗಳು ನಡೆದವು.ಪ್ರತಿಷ್ಠಿತ ಗೂಗಲ್,ವಿಕಿಪೀಡಿಯಾ,ಮೊಜಿಲ್ಲಾ,ಫ್ಲಿಕರ್
ಗಳು ತಮ್ಮ ಸೇವೆಯನ್ನು ರದ್ದುಪಡಿಸಿ ಕರಾಳ ದಿನವನ್ನಾಗಿ ಆಚರಿಸಿದವು.ಕೊನೆಗೂ ಕಾಯ್ದೆ ರದ್ದಾಯಿತು.

ಬಂಡವಾಳಶಾಹಿಗಳ ಮತ್ತು ರಾಜಕಾರಣಿಗಳ
ಕಟು ಧೋರಣೆಗಳನ್ನು ಧಿಕ್ಕರಿಸಿಕೊಂಡು ಬಂದಿದ್ದ ಸ್ವಾರ್ಟ್ಜ್,ಇದನ್ನು ಸಹಿಸದೆ ಕಾನೂನಿನ ಚೌಕಟ್ಟು
ಮೀರಿ ಎರಡು ಪ್ರಮುಖ ಅಪರಾಧಗಳಲ್ಲಿ ಭಾಗಿಯಾದ.
1.ಸಂಯುಕ್ತ ಸಂಸ್ಥಾನದ ಫೆಡರಲ್ ನ್ಯಾಯಾಲಯದಲ್ಲಿ
ಸಾರ್ವಜನಿಕರ ಉಪಯೋಗಕ್ಕಿರುವ ವಿದ್ಯುನ್ಮಾನ ಕಡತಗಳಿಗೆ(PACER-Public Access to Court
Electronic Records) ಶುಲ್ಕ ಪಾವತಿ ಮಾಡಬೇಕಿತ್ತು.ಸ್ವಾರ್ಟ್ಜ್ ಮತ್ತು ಸಮಾನ ಮನಸ್ಕರು ಸರ್ಕಾರಿ
ಕಡತಗಳಿಗೆ ಹಕ್ಕುಸ್ವಾಮ್ಯವಿಲ್ಲದಿದ್ದರೂ ಜನರಿಂದ ಹಣ ಕಬಳಿಸುತ್ತಿದ್ದುದನ್ನು ಮನಗಂಡರು.ಇದಕ್ಕಾಗಿ
ಫೆಡರಲ್ ಕೋರ್ಟ್ನ 17 ಗ್ರಂಥಾಲಯಗಳಿಂದ ಸುಮಾರು 2 ಕೋಟಿ ಪುಟಗಳಷ್ಟು ಮಾಹಿತಿಯನ್ನು ಸ್ವಾರ್ಟ್ಜ್ ಅಕ್ರಮವಾಗಿ
ಕಸಿದುಕೊಂಡ.FBIಯಿಂದ ವಿಚಾರಣೆಗೊಳಗಾದರೂ ಸೂಕ್ತ ಸಾಕ್ಷ್ಯವಿಲ್ಲದೆ ಪ್ರಕರಣ ಖುಲಾಸೆಯಾಯಿತು.
2.ವಿಶ್ವವಿದ್ಯಾಲಯಗಳಲ್ಲಿನ ಸಂಶೋಧನಾ ಪ್ರೌಢ ಪ್ರಬಂಧಗಳು
ಸಾರ್ವಜನಿಕವಾಗಿ ಲಭಿಸುತ್ತಿಲ್ಲವೆಂಬ ಕೂಗು ಕೇಳಿಬಂತು.JSTOR (Journal STORAGE) ಎಂಬುದು ಒಂದು
ಡಿಜಿಟಲ್ ಲೈಬ್ರರಿ.ಇಲ್ಲಿ ಸುಮಾರು 7000 ವಿವಿಗಳ ಶೈಕ್ಷಣಿಕ ಪ್ರಬಂಧಗಳ ಸಂಗ್ರಹವಿದೆ.ಸ್ವಾರ್ಟ್ಜ್
ಮಸ್ಯಾಚುಸೆಟ್ ವಿವಿಗೆ ಸಂಬಂಧಪಟ್ಟ ಸುಮಾರು 4 ಮಿಲಿಯ ಶೈಕ್ಷಣಿಕ ಸಂಚಿಕೆಗಳನ್ನು ಅಕ್ರಮವಾಗಿ ಕದ್ದಿರುವುದು
ಹಲವರ ಕೆಂಗಣ್ಣಿಗೆ ಗುರಿಯಾಯಿತು.ಜುಲೈ 19,2011ರಂದು ವಿವಿ ಪರ ವಕೀಲ ಕಾರ್ಮೆನ್ ಓರ್ಟ್ಸ್
Computer Fraud and Abuse Act ಅಡಿಯಲ್ಲಿ ಕಾನೂನು ಕ್ರಮಕ್ಕೆ ಸ್ವಾರ್ಟ್ಜ್ ನು ಒಳಪಡಿಸಿದ.ಆದರೆ
ಸ್ವಾರ್ಟ್ಜ್ ಶರಣಾಗಿದ್ದರಿಂದ ಜಾಮೀನಿನ ಮೇಲೆ ಬಿಡುಗಡೆಯಾದ.JSTOR ಉಚಿತವಾಗಿ ತನ್ನ ಮಾಹಿತಿಯನ್ನು
ಹಂಚದೆ ಮೋಸ ಮಾಡುತ್ತಿದೆಯೆಂಬ ಕಾರಣಕ್ಕೆ ಸ್ವಾರ್ಟ್ಜ್ ಈ ಕೃತ್ಯ ಎಸಗಿದ್ದ.
ಪ್ರಕರಣದ ವಿಚಾರಣೆ ಮಾಡಿದ ಫೆಡರಲ್
ನ್ಯಾಯಾಲಯ ತನ್ನ ತೀರ್ಪನ್ನು ನೀಡಿತು.ಈ ಪ್ರಕಾರ ಸ್ವಾರ್ಟ್ಜ್ ಗೆ 35 ವರ್ಷಗಳ ಜೈಲು ಶಿಕ್ಷೆ ಮತ್ತು ಒಂದು ಲಕ್ಷ ದಂಡ ವಿಧಿಸಲಾಗಿತ್ತು.ಅಷ್ಟೇ
ಅಲ್ಲದೆ ಆರೋಪ ಪಟ್ಟಿಯನ್ನು 4ರಿಂದ 13ಕ್ಕೆ ಏರಿಸಲಾಗಿತ್ತು.ಸ್ವಾರ್ಟ್ಜ್ ಸಲ್ಲಿಸಿದ್ದ ನಿರೀಕ್ಷಣಾ
ಜಾಮೀನು ವಜಾವಾಯಿತು.ದುರಂತವೆಂದರೆ,ಇದಾದ ಎರಡು ದಿನಗಳಲ್ಲಿ ಅಂದರೆ ಜನವರಿ 11,2013ರಂದು ತಾನಿದ್ದ
ಕೊಠಡಿಯಲ್ಲಿ ಆತ್ಮಹತ್ಯೆಗೆ ಶರಣಾದ.ವೈಯುಕ್ತಿಕ ಕಾರಣಗಳಿಂದ
ಜೀವ ತೆಗೆದುಕೊಂಡ ಎಂದು ದಾಖಲು ಮಾಡಿದರೂ,ಫೆಡರಲ್ ನ್ಯಾಯಾಲಯದ ತೀರ್ಪು ಮುಳುವಾಗಿ ಪರಿಣಮಿಸಿರಬೇಕೆಂದು
ಸಮರ್ಥಿಸಿಕೊಂಡರೂ ತಪ್ಪಿಲ್ಲ.ಸ್ವಾರ್ಟ್ಜ್ ಉಚಿತ ಮತ್ತು ಸಮಾನವಾಗಿ ಮಾಹಿತಿಯ ಪೂರಣಕ್ಕೆ ಅಂತರ್ಜಾಲವನ್ನು
ವಾಹಿನಿಯಾಗಿ ಬಳಸಿಕೊಂಡ.ಖಾಸಗೀಕರಣದ ವಿರುದ್ಧ ‘Private Theft On Public Culture’ ಎಂದು ಜರಿದಿದ್ದ.ಮಾಹಿತಿಯ
ಹರಿವಿನಲ್ಲಿರುವ ಅಸಮಾನತೆಯ ಕುರಿತು ಜಗತ್ತಿಗೇ ತಿಳಿಹೇಳಿದ ಒಬ್ಬ ಅಪ್ರತಿಮ ಸಾಧಕನನ್ನು ಕಳೆದುಕೊಂಡಿದ್ದೇವೆ.ಅನೇಕ
ಲೇಖಕರು ತಮ್ಮ ಹಕ್ಕುಸ್ವಾಮ್ಯದ pdf(portable document format) ಕೃತಿಗಳನ್ನು ಅಂತರ್ಜಾಲದಲ್ಲಿ
ಮುಕ್ತವಾಗಿಸಿ ಶ್ರದ್ಧಾಂಜಲಿ ಸಲ್ಲಿಸಿದರು.ಒಂದು ವೇಳೆ ಅಂತರ್ಜಾಲಕ್ಕೆ ಆಲೋಚನೆ ಮಾಡುವ ಶಕ್ತಿಯಿರುತ್ತಿದ್ದರೆ
ಸ್ವಾರ್ಟ್ಜ್ ಸಾವಿನಿಂದ ದುಃಖ ತಪ್ತವಾಗುತ್ತಿತ್ತು.
ದೀವಟಿಗೆ by ಸಂದೀಪ ಫಡ್ಕೆ, ಮುಂಡಾಜೆ is licensed under a Creative Commons Attribution-NonCommercial-NoDerivs 2.5 India Licens
Comments