Skip to main content

ಹೊಸ ವರ್ಷ ಬಂತೂ


          ಯಾಕೋ ಬೆಳಿಗ್ಗಿನಿಂದಲೇ ಮೈ-ಮನಸ್ಸು ಸರಿಯಿಲ್ಲ. ಸಾವಿನ ಮನೆಯ ಹಾಗೆ ಮೌನ ಆವರಿಸಿದೆ. ಇಷ್ಟು ದಿನ ಇಲ್ಲದ ಚಂಚಲತೆ ಇವತ್ತು ಗಿರಕಿ ಹೊಡೆಯುವಂತೆ ಮಾಡಿದೆ. ದೇಹಾಲಾಸ್ಯವೇನಿಲ್ಲ. ಏನೋ ಒಂದು ರೀತಿಯ ಭಯ, ಆತಂಕ ಹೇಳದೆ ಕೇಳದೆ ನೆಲೆ ನಿಂತಿದೆ. ವರ್ಷವಿಡೀ ಯೋಜನೆ ಹಾಕುವುದರಲ್ಲೇ ಕಳೆದು ಹೋಯಿತಲ್ಲವೆಂಬ ಪಾಪಪ್ರಜ್ಞೆ ಬೇರೆ ಕಾಡುತ್ತಿದೆ. ಕೊನೆಯ ದಿನದ ಅನುಭವ ಈ ತರಹವಾಗಬಹುದೆಂದು ಕನಸಿನಲ್ಲೂ ಅಂದುಕೊಂಡಿರಲಿಲ್ಲ. ಇಂದಿನ ಪತ್ರಿಕೆ ನಾಳಿನ ರದ್ದಿಯಾಗುವ ಹಾಗೆ ನನ್ನ ಜೊತೆಗಿರುವ ನೆನಪುಗಳು, ಸಂಬಂಧಗಳು, ವಸ್ತುಗಳು ನಾಳೆಗೆ ಹಳೆಯದಾಗಿ ಕಳಾಹೀನವಾದಂತೆ ಕಂಡರೆಂಬ ಕಳವಳ ಶುರುವಾಗಿದೆ. ಇಲ್ಲ, ಹಾಗಾಗಲು ಬಿಡಬಾರದು. ಇವೆಲ್ಲವನ್ನು ಮುಂದಿನ ವರ್ಷಕ್ಕೆ ಜೋಪಾನವಾಗಿ ಸಾಗಿಸಬೇಕು. ಹೊಸ ವರ್ಷಕ್ಕೆ ‘ಹೊಸತು’ ನನ್ನ ಹತ್ತಿರಕ್ಕೆ ಸುಳಿಯದಂತೆ ನಿಗಾವಹಿಸಬೇಕೆಂದು ಶಪಥ ಮಾಡಿದ್ದೇನೆ. ಇನ್ನೇನು ಕೆಲವೇ ಕ್ಷಣಗಳಲ್ಲಿ ಒಂದು ಸಾಲು ಇತಿಹಾಸದ ಪುಟ ಸೇರಲಿದೆ.

          ಕತ್ತಲು ಕವಿದಂತೆ ಬೀದಿ ದೀಪಗಳು ಮಂದವಾಗಿ ಬೆಳಕು ಚೆಲ್ಲುತ್ತಿವೆ. ರಸ್ತೆಯುದ್ದಕ್ಕೂ ಹೊಸ ವರ್ಷಾಚರಣೆಯ ಬಿರುಸು ಆರಂಭವಾಗಿದೆ. ಇಷ್ಟೊಂದು ಖುಷಿ ಪಡುವ ವಿಚಾರೇನಿದೆ? ಅರ್ಥವೇ ಆಗುತ್ತಿಲ್ಲ. ನಾನಂತೂ ನಾಲ್ಕು ಗೋಡೆಗಳ ಮಧ್ಯೆ ರಾತ್ರಿ ಕಳಿಯಬೇಕೆಂದು ನಿರ್ಧರಿಸಿದ್ದೇನೆ. ಮೊನ್ನೆ ಪ್ರಳಯವಾಗುತ್ತದೆಂದು ಹೆದರಿಸಿದಾಗಲೂ ನನ್ನಲ್ಲಿ ಈ ತರಹ ವ್ಯತಿರಿಕ್ತ ಬದಲಾವಣೆಗಳು ಉಂಟಾಗಿರಲಿಲ್ಲ. ಹೊಸ ಸವಾಲುಗಳನ್ನು, ಅಡ್ಡಿ-ಆತಂಕಗಳನ್ನು ಎದುರಿಸುವುದು ಹೇಗೆ ಎಂಬ ಚಿಂತೆ ಕೂತಲ್ಲಿ ಕೂರಲು ಬಿಡುತ್ತಿಲ್ಲ. ಚಡಪಡಿಕೆ ಜಾಸ್ತಿಯಾಗಿದೆ. ಇಷ್ಟು ವರ್ಷಗಳಿಂದ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದು ಇದೇ ಮೊದಲು. ಹೊಸ ವರ್ಷವನ್ನು ಆಹ್ವಾನಿಸುವುದೆಂದರೆ ಬೂದಿ ಮುಚ್ಚಿದ ಕೆಂಡದ ಮೇಲೆ ಕೈ ಇಟ್ಟ ಹಾಗೆಯೇ ಅಲ್ಲವೇ? ನನ್ನ ಪರಿಸ್ಥಿತಿ ತವರು ಮನೆ ಬಿಟ್ಟು ಬರುವ ಮಗಳ ವೇದನೆಯಂತಾಗಿದೆ. ವಿದಾಯದ ನೋವು ನುಂಗುತ್ತಾ ನನ್ನದೇ ಪ್ರಪಂಚದಲ್ಲಿ ವಿಹರಿಸುತ್ತಿದ್ದೇನೆ. ಹೊರಗಡೆ ದೊಂಬಿ ಹೆಚ್ಚಾಗಿದೆ. ಬಾಗಿಲು, ಕಿಟಕಿಗಳನ್ನು ಭದ್ರವಾಗಿ ಮುಚ್ಚಿದ್ದೇನೆ. ಆದರೂ ಬೊಬ್ಬಿಡುವ ಜನರ ಕೂಗು ಅಶರೀರ ವಾಣಿಯಂತೆ ಕೇಳಿಸುತ್ತಿದೆ. ಯಾರೋ ಕರೆದ ಹಾಗೆ, ಬಾಗಿಲು ತಟ್ಟಿದ ಹಾಗೆ ಅನಿಸಿದೆ. ಬಹುಶಃ ನನ್ನ ಗೆಳೆಯರೇ ಇರಬೇಕು. ಆ ಎಣ್ಣೆ ಬಾಟಲಿಗಳ ಜೊತೆ ಮೈಮರೆತು ಕುಣಿಯುವುದು ಸುತರಾಂ ಇಷ್ಟವಿಲ್ಲ. ನಾಳೆಯನ್ನು ನೋಡುವ ಕೌತುಕ ಜಾಗೃತವಾಗಿದೆ. ನಡು ರಾತ್ರಿಯಾಗಲು ನಿಮಿಷಗಳಷ್ಟೇ ಬಾಕಿಯಿವೆ. ಮಲಗಿದರೆ ನಿದ್ದೆಯೂ ಹತ್ತುತ್ತಿಲ್ಲ. ಟಿ.ವಿ.ಯಲ್ಲಿ ವರ್ಷದ ‘ಫ್ಲಾಷ್ ಬ್ಯಾಕ್’ನದೇ ಸುದ್ದಿ. ತಾನೇನು ಕಡಿಮೆಯೆಂಬಂತೆ ಗಾಳಿಗೆ ತೂರಾಡುತ್ತಿರುವ ಕ್ಯಾಲೆಂಡರ್ ಎಲ್ಲ ತಿಂಗಳುಗಳನ್ನು ರಪರಪನೆ ತೆರೆಯುತ್ತಾ ನನ್ನ ಹಿನ್ನೋಟವನ್ನು ನೆನಪಿಸಿದೆ. ಈ ನೆನಪುಗಳ ಜಾಡು ಹಿಡಿದು ಹೋದ ನನಗೆ ಸದ್ದಿಲ್ಲದೆ ಹೊಸ ವರ್ಷಕ್ಕೆ ಅಡಿಯಿಟ್ಟಿರುವುದು ಗೊತ್ತೇ ಆಗಲಿಲ್ಲ. ಆದರೆ ಮನಸ್ಸು ಮತ್ತೆ ವಿಭ್ರಾಂತವಾಗಿದೆ. ಧೈರ್ಯದಿಂದ ಬಾಗಿಲು ತೆರೆದೆ. ನೀರವತೆಯಲ್ಲಿ ಮಿಂದಿರುವ ಊರಲ್ಲಿ ಹೊಸತೇನೂ ಕಾಣುತ್ತಿಲ್ಲ. ಯಾವ ರೂಪಾಂತರಗಳೂ ಆಗಿಲ್ಲ. ಹಾಗಾದರೆ, ಹೊಸ ವರ್ಷ ಬರೀ ಕ್ಯಾಲೆಂಡರಿಗಷ್ಟೇ ಸೀಮಿತವೇ? ಛೆ, ಇದೆಂತಹ ಮೋಸ! ನನ್ನ ಕಾಲ್ಪನಿಕ ಜಗತ್ತು ಟಿಸಿಲೊಡೆದು ನೈಜತೆಯತ್ತ ಮರಳಿತು.

Creative Commons License
ದೀವಟಿಗೆ by Sandeep Phadke is licensed under a Creative Commons Attribution-NonCommercial-NoDerivs 2.5 India License.

Comments

Popular posts from this blog

ಇಬ್ಬನಿ

ಮುಂಜಾವಿನ ತೆಕ್ಕೆಯೊಳು  ಹಸಿರುಟ್ಟ ಭೂರಮೆಯ  ಒಡಲಲ್ಲಿ  ಹನಿಯುತಿವೆ ಹನಿಗಳು  ಸಾಲು ಸಾಲಾಗಿ...  ಮರ-ಗಿಡಗಳ ಎಲೆಗಳ ಮೇಲೆ ದೃಶ್ಯವಾಗುತ್ತವೆ  ದಣಿದ-ಮಣಿದ ಮೈ-ಮನಕ್ಕೆ  ಜೀವ ತುಂಬುತ್ತವೆ ಪನ್ನೀರ ಪಸರುತ್ತಾ... ಅಲ್ಪಾಯುಷಿಯಾದರು  ದೀಪದ ಬುಡ್ಡಿಯಂತೆ ಉದಾರ ಗುಣ  ಚಳಿಯನ್ನೂ ಲೆಕ್ಕಿಸದೇ  ಅವಿರತ ದುಡಿಮೆ... ಬೆಳಕಿನ ಪರದೆ ಸರಿದಂತೆ  ಮತ್ತಷ್ಟು ಮೆರುಗು ಕ್ಷಣಮಾತ್ರದಲ್ಲಿ  ಜೀವದ ಹಂಗು ತೊರೆದು  ಮಂಗ ಮಾಯ... ತನ್ನ ಶಾಂತ ಚಿತ್ತ ಸೌಮ್ಯ ಸ್ವಭಾವ  ಮತ್ತೆ ಹುಟ್ಟಲು ಕಾರಣ ಇಬ್ಬನಿ ಇರಿಯುವುದಿಲ್ಲ ಇಹ-ಪರರ ... ದೀವಟಿಗೆ by Sandeep Phadke is licensed under a Creative Commons Attribution-NonCommercial-NoDerivs 2.5 India License .

ಯುವ ಜನತೆ ಮತ್ತು ಸಾಮಾಜಿಕ ತಾಣಗಳು

        ಸಂ ಪರ್ಕ ಮಾಧ್ಯಮಗಳು ಒಂದೆರಡಲ್ಲ,ಹಲವು ಬಗೆಯವು.ಅನಾದಿಕಾಲದಿಂದಲೂ ಇಂತಹ ಮಾಧ್ಯಮಗಳು ಜಾರಿಯಲ್ಲಿವೆ. ಕಾಲ ಬದಲಾದಂತೆ ಶೀಘ್ರ ಸಂಪರ್ಕ ಕಲ್ಪಿಸಬಹುದಾದ ಸಾಧನಗಳು ಬರಲಾರಂಭಿಸಿದವು.ಇಂದಿನ ಈ-ಮೇಲ್,ಸಾಮಾಜಿಕ ತಾಣಗಳು (ಫೇಸ್ ಬುಕ್,ಟ್ವಿಟ್ಟರ್..) ಪ್ರಚಲಿತ ಸಾಧನಗಳು.ಆದರೆ ಸಾಂಪ್ರದಾಯಿಕ ಪತ್ರ ವ್ಯವಹಾರಕ್ಕೆ ಇದ್ದ ಗೈರತ್ತು ಈ ಮಾಧ್ಯಮಗಳಲ್ಲಿ ಕಾಣುವುದು ಕಷ್ಟ.ಆದರೆ ಹೊಸತನಕ್ಕೆ ಅಂಟಿಕೊಳ್ಳುವ ಅನಿವಾರ್ಯತೆ ಬೇರೆಯದೇ ಪ್ರಪಂಚಕ್ಕೆ ಕರೆದೊಯ್ಯುತ್ತವೆ.ಎಲ್ಲೋ-ಎಂದೋ ಭೇಟಿಯಾದವರು, ಯಾವುದೋ ಊರಿನಲ್ಲಿರುವವರು ಹೀಗೆ ಹತ್ತು ಹಲವು ಕಾರಣಗಳಿಂದ ದೂರವಾದವರನ್ನು ಹತ್ತಿರಕ್ಕೆ,ಸದಾ ಸಂಪರ್ಕದಲ್ಲಿರುವಂತೆ ಮಾಡುವ ಛಾತಿ ಸಾಮಾಜಿಕ ತಾಣಗಳಂತಹ ಅಂತರ್ಜಾಲ ಸಂಬಂಧಿ ವ್ಯವಸ್ಥೆಗಳಿಗಿವೆ.ವಯಸ್ಸಿನ ಅಂತರವಿಲ್ಲದೇ ಎಲ್ಲರನ್ನು ಆಕರ್ಷಿಸುವ ತಾಣಗಳು ಮನೆ-ಮನಗಳಲ್ಲಿ ಹಸುರಾಗಿವೆ.ಇವುಗಳ ಬಳಕೆ ಹೆಚ್ಚಾಗುತ್ತಲೇ ಇದೆ.ಒಂದು ಘಳಿಗೆಯೂ ಬಿಟ್ಟು ಇರಲಾರದಷ್ಟು ಪ್ರಭಾವ ಬೀರಿವೆ.ಭಾರತ ಫೇಸ್ ಬುಕ್ ಬಳಕೆಯಲ್ಲಿ ವಿಶ್ವದಲ್ಲೇ ಮೂರನೇ ಸ್ಥಾನದಲ್ಲಿದೆ.        ಯುವ ಜನಾಂಗ ಈ ತಾಣಗಳ ಅತಿ ಹೆಚ್ಚು ಬಳಕೆ ಮಾಡುತ್ತಿರುವುದು ಗೊತ್ತಿರುವ ವಿಚಾರವೆ.ಗೆಳೆಯರ ಬಳಗ ಕಟ್ಟಿಕೊಳ್ಳುವ ಆಸಕ್ತಿ ಹೆಚ್ಚಿಸುತ್ತಿರುವ ಸಾಮಾಜಿಕ ತಾಣಗಳು ಓದಿನ ಮೇಲಿರಬೇಕಾದ ಗಮನ ಕುಂಠಿತಗೊಳಿಸುತ್ತಿದೆ ಎಂಬ ಅಭಿಪ್ರಾಯಗಳು ಕೇಳಿಬರು...

-: ಮುತ್ತಿನ ಹನಿಗಳು :-

------೧------ ಚುಂ- ಬನಕ್ಕೆ ಲಗ್ಗೆಯಿಡುವ ಯುವ ಜೋಡಿಗಳು ಅದೆಂತಹ ಪ್ರಕೃತಿ ಆರಾಧಕರು..! ------೨------ ಹೂದೋಟದಲ್ಲಿ ಕಾಣದ ಪತಂಗಗಳು ಯಥೇಚ್ಛ ಮಧು ಸವಿಯಲು ಯುವತಿಯರ ಹಿಂದೆ ಬಿದ್ದಿವೆಯಂತೆ..!