
ಕೇಂದ್ರ ಮಾನವ ಸಂಪನ್ಮೂಲ ಸಚಿವ ಕಪಿಲ್
ಸಿಬಲ್ ಮುಂದಿಟ್ಟಿರುವ ಐಐಟಿ ಕೌಂನ್ಸಿಲ್ ನ ಪ್ರಸ್ತಾವನೆ ಚರ್ಚೆಗೆ ಗ್ರಾಸವಾಗಿದೆ. ‘ಒಂದು ದೇಶ, ಒಂದು
ಪರೀಕ್ಷೆ’ ಎನ್ನುವ ನಿರ್ಧಾರಕ್ಕೆ ಮಿಶ್ರ ಪ್ರತಿಕ್ರಿಯೆ ಉಂಟಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.
ಪ್ರತಿಷ್ಠಿತ ಐಐಟಿ, ಎನ್ಐಐಟಿ, ಐಐಐಟಿ ಮತ್ತು ಕೇಂದ್ರದ ಸ್ವಾಮ್ಯದಲ್ಲಿರುವ ವಿದ್ಯಾ ಸಂಸ್ಥೆಗಳಿಗೆ
ರಾಷ್ಟ್ರ ವ್ಯಾಪಿ ಜೆಇಇ ಮಾದರಿಯ ಒಂದೇ ಪರೀಕ್ಷೆ ನಿಯೋಜಿಸುವ ಯೋಜನೆ ಇದು. ಸುಮಾರು ಎರಡೂವರೆ ವರ್ಷಗಳ
ಅಧ್ಯಯನ ಈ ಯೋಜಿತ ಉದ್ದೇಶದ ಹಿಂದಿದೆ. ಸಮಾಜದ ಒಂದು ವರ್ಗಕ್ಕಷ್ಟೇ ನಿಲುಕುವಂತಿರುವ ಈಗಿನ ಪ್ರವೇಶ
ಪರೀಕ್ಷೆ ನಮೂನೆ ಗ್ರಾಮೀಣ ವಿದ್ಯಾರ್ಥಿಗಳ ಪಾಲಿಗೆ ದಕ್ಕುವಂತಿಲ್ಲ. ಕಾರಣ, ಈ ಪರೀಕ್ಷೆಗೂ, ಶಾಲಾ
ಪಠ್ಯಕ್ರಮಕ್ಕೂ ಹೆಚ್ಚಿನ ಸಂಬಂಧವಿಲ್ಲ. ಹಾಗಾಗಿ, ಅದಕ್ಕೊಂದು ವಿಶೇಷ ತರಬೇತಿಯ ಅಗತ್ಯವಿದೆ. ಐಐಟಿ ಬಾಂಬೆ 2006ರಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ ದಾಖಲಾತಿಯಾದ
476 ವಿದ್ಯಾರ್ಥಿಗಳ ಪೈಕಿ 300 ಮಂದಿ ಕೋಚಿಂಗ್ ಸೆಂಟರ್ ಗಳ ಮೂಲಕ ಬಂದಿರುವುದು ಅರಿವಿಗೆ ಬಂದಿದೆ.
ಇಂತಹ ಕೆಲ ನ್ಯೂನತೆಗಳನ್ನು ಸರಿದೂಗಿಸಲು ಉದ್ದೇಶಿತ ಪರೀಕ್ಷೆಯು 40:30:30 ಅನುಪಾತದಲ್ಲಿದ್ದು, ಶೇ.40
ಆದ್ಯತೆಯನ್ನು 12ನೇ ತರಗತಿಗೆ ಮತ್ತು ಕ್ರಮವಾಗಿ ಶೇ.30 ಮುಖ್ಯ ಪರೀಕ್ಷೆಗಳಿಗೆ ನೀಡಲಾಗಿದೆ. 12ನೇ
ತರಗತಿಯ ಅಂಕಗಳನ್ನು ಪರಿಗಣಿಸುವುದರಿಂದ ಶಾಲಾ ಶಿಕ್ಷಣದ ಭದ್ರ ಬುನಾದಿ ವಿದ್ಯಾರ್ಥಿಗಳಿಗಿರುತ್ತದೆ
ಮತ್ತು ಎಲೆ ಮರೆಯ ಕಾಯಿಯಂತಹ ಪ್ರತಿಭೆಗಳಿಗೆ ಅನುವಾಗಬಹುದೆಂಬ
ಆಶಯ ಸ್ವಾಗತಾರ್ಹ. ಅಂತೆಯೇ, ಗಗನ ಕುಸುಮವೆಂದು ನಂಬಿದ್ದ ಐಐಟಿ ಶಿಕ್ಷಣ ಎಲ್ಲರಿಗೂ ತಲುಪಿಸುವ ಪ್ರಯತ್ನದಿಂದ
ಕೆಲವರಿಗಾದರೂ ಸದಾವಕಾಶ ದೊರಕಬಹುದು.
ಒಳ್ಳೆಯ ಮುಂದಾಲೋಚನೆಯಾದರೂ, ಕಾರ್ಯರೂಪಕ್ಕೆ
ತರುವಲ್ಲಿ ಅನೇಕ ಅಡ್ಡಿ-ಆತಂಕಗಳನ್ನು ಎದುರಿಸುವ ಸಾಧ್ಯತೆಯಿದೆ. ಸುಮಾರು 5000 ಸೀಟುಗಳಿಗಾಗಿ ನಡೆಯುವ
ಪರೀಕ್ಷೆಯನ್ನು ಸುಮಾರು 15 ಲಕ್ಷ ಆಕಾಂಕ್ಷಿಗಳು ಎದುರಿಸಬೇಕಾಗುತ್ತದೆ.ಒಟ್ಟು ಮೂರು ಹಂತಗಳಲ್ಲಾಗುವುದರಿಂದ,
ದೊಡ್ಡ ಸಂಖ್ಯೆಯ ವಿದ್ಯಾರ್ಥಿಗಳಲ್ಲಿ ಮಾನಸಿಕ ಒತ್ತಡ, ಗೊಂದಲ ಮೂಡುವ ಸಾಧ್ಯತೆ ಹೆಚ್ಚಿದೆ. ರಾಜ್ಯವಾರು
ಪಠ್ಯಕ್ರಮಗಳಲ್ಲಿರುವ ವ್ಯತ್ಯಾಸದಿಂದಾಗಿ 12ನೇ ತರಗತಿ ಅಂಕಗಳನ್ನು ಪರಿಗಣಿಸುವ ಸಂಬಂಧ ಐಐಟಿಗಳು ತಕರಾರು
ತೆಗೆದಿವೆ. ಇನ್ನು, ಶಾಲೆಯಲ್ಲಿನ ಬೋಧನೆ ಪೂರಕವಾಗಿಲ್ಲ ಎಂದಾಗ ಸಹಾಯಕ್ಕೆ ಕೊಚಿಂಗ್ ಸೆಂಟರ್ ಗಳ ಮೊರೆ
ಹೋಗುತ್ತಾರೆ. ಕೋಚಿಂಗ್ ಸೆಂಟರ್ ಗಳ ಹಾವಳಿಯನ್ನು ಹೊಸ ಪರೀಕ್ಷಾ ವಿಧಾನದ ಮೂಲಕ ತಡೆಗಟ್ಟಬಹುದೆಂಬುದು
ದೂರದ ಮಾತು. ಜೆಇಇಯಂತಹ ಪರೀಕ್ಷೆಗಳಿಗೆ ಸಿದ್ಧರಾಗಲು, ಪಠ್ಯಕ್ರಮದಲ್ಲೂ ಬದಲಾವಣೆ ತರುವುದು ಅನಿವಾರ್ಯ.
ಆದರೆ, ಈ ಕೆಲಸ ಹಂತ ಹಂತವಾಗಿ ನಡೆಯಬೇಕು. ಏಕಾಏಕಿ ಬದಲಾವಣೆ ಒಡ್ಡುವುದು ವಿದ್ಯಾರ್ಥಿಗಳು, ಹೆತ್ತವರು
ಮತ್ತು ಬೋಧಕ ವರ್ಗವನ್ನು ಇಕ್ಕಟ್ಟಿಗೆ ಸಿಲುಕಿಸುತ್ತದೆ. ನಮ್ಮ ರಾಜ್ಯದಲ್ಲಿ ಈ ಬಾರಿ ಪ್ರಥಮ ಪಿಯುಸಿಗೆ
ಸಿಬಿಎಸ್ಸಿ ಪಠ್ಯಕ್ರಮ ಜಾರಿಗೊಳಿಸಿದ ಹಿನ್ನೆಲೆ ಅನೇಕ ಪರ-ವಿರೋಧಗಳು ವ್ಯಕ್ತವಾಗಿವೆ.
ಬಹುಶಃ ಇಂತಹ ಮಾರ್ಪಾಡುಗಳು ಪ್ರಾಥಮಿಕ
ಹಂತದಲ್ಲೇ ನಡೆದರೆ, ವಿದ್ಯಾರ್ಥಿಗಳು ಪ್ರಯೋಗ ಪಶುಗಳಾಗುವುದನ್ನು ತಪ್ಪಿಸಬಹುದು. ಶಿಕ್ಷಣ ಶಿಕ್ಷೆಯೆಂದನಿಸದು.
ಮಾರಾಟದ ಸರಕಿನಂತಾಗಿರುವ ಶಿಕ್ಷಣದ ಘನತೆಯನ್ನು ಕಾಪಾಡುವುದು ಬಹು ಮುಖ್ಯವಾಗಿದೆ. ಅಪವಾದವೆಂಬಂತೆ, ನಾವಿನ್ನೂ ಯಾವ ಮಾಧ್ಯಮದಲ್ಲಿ ಶಿಕ್ಷಣ
ನೀಡಬೇಕೆಂಬ ಇತ್ತಂಡ ವಾದಕ್ಕೆ ಪರಿಹಾರ ಕಂಡುಕೊಳ್ಳುವಲ್ಲಿ ವಿಫಲ ಯತ್ನ ನಡೆಸುತ್ತಿದ್ದೇವೆ. ಹಣ ಮತ್ತು
ಜಾತಿಯ ಸಂಕೋಲೆಯಿಂದ ಶಿಕ್ಷಣವನ್ನು ಕಟ್ಟಿ ಹಾಕುತ್ತಿರುವುದು ದುರ್ದೈವವೇ ಸರಿ. ಸರ್ಕಾರಿ ಶಾಲೆಗಳು
ಮುಚ್ಚಲು ಕಳಪೆ ಗುಣಮಟ್ಟ, ಭಾಷಾ ಮಾಧ್ಯಮದ ತೊಡಕು ಅಥವಾ ಜನ ಸಾಮಾನ್ಯರ ವಿಚಾರ ಲಹರಿ ಬದಲಾಗಿರುವುದು
ಕಾರಣವಾಗಿರಬಹುದು. ಇವೆಲ್ಲವನ್ನು ಪರಿಶೀಲಿಸದೆ ಹೋದರೆ, ಬಡತನ ರೇಖೆಗಿಂತ ಕೆಳಗಿರುವವರು ಶಿಕ್ಷಣದಿಂದ
ವಂಚಿತರಾಗಬಹುದು. ಬೆಂಕಿ ಬಿದ್ದ ಮೇಲೆ ಬಾವಿ ತೋಡುವ ಜಾಯಮಾನ ಬಿಟ್ಟು ಎಲ್ಲಾ ಆಯಾಮಗಳಿಂದಲೂ ಶಿಕ್ಷಣದ
ಉನ್ನತಿಗೆ ಪಣತೊಡಬೇಕಿದೆ.
Comments