(ಕವಿ ಗೋಷ್ಠಿ- ಬೆಳ್ತಂಗಡಿ ತಾ|| 11ನೇ ಕನ್ನಡ ಸಾಹಿತ್ಯ ಸಮ್ಮೇಳನ, ಮುಂಡಾಜೆ :: 20-12-2011) ದೂರವಾದಂತೆ ನೆನಪಾಗುತ್ತವೆ ಹಳೆಯ, ಬಣ್ಣ ಮಾಸಿದ ಗಟ್ಟಿ ಗೋಡೆಗಳು. ಆದರೆ, ನೆಲೆಗಾಣುವ ನಿರೀಕ್ಷೆಯಲಿ ತೆರೆದುಕೊಳ್ಳುವ ಹೆಬ್ಬಾಗಿಲಿಗೆ, ಗೋಡೆಗಳೆಂಬುದು ಮರೀಚಿಕೆ. ಅನುಕಂಪ, ಮಾನ-ಮರ್ಯಾದೆ ಬೊಗಸೆಯಲಿ ಬಚ್ಚಿಡುವ ಇನ್ನಿಲ್ಲದ ಧಾವಂತ. ದುರುಪಯೋಗವಾಗಬಹುದು ನಡು ರಾತ್ರಿ-ಹಗಲೆನ್ನದೆ, ಕಾಮಲೆ ಕಣ್ಣೆಗೆ, ಗೋಡೆಗಳಿಲ್ಲ ರಕ್ಷಣೆಗೆ. ಇಲ್ಲಿ ಗೋಡೆಗಳಿಲ್ಲ... ನೋಡುವವರು ಅದೆಷ್ಟೋ ಜನ ನಮ್ಮ ಆಟ, ಭಯ, ಆತಂಕ, ಅವಮಾನದ ವರಸೆ. ಬಯಸಿ ಬಂದವರಂತೆ ನಾವೂ ನಡೆಯುತ್ತೇವೆ ಅನಿವಾರ್ಯದ ಅಂಕದಲಿ. ನೂರು ಆಸೆಗಳನು ಹೊತ್ತು, ಟೊಂಕ ಕಟ್ಟಿ ನಿಂತವರು, ಬಳಲಿ-ಬೆಂಡಾಗುವವರೆಗೆ, ದಿಶೆ ತಪ್ಪುವವರೆಗೆ, ಅನಿರ್ದಿಷ್ಟ ಕಾಲದ ತೀರದ ಪಯಣ. ಗೋಡೆಗಳಿಲ್ಲ ಅಡೆ-ತಡೆಗೆ. ಕಣ್ಣಾ-ಮುಚ್ಚಾಲೆ ಆಟದಂತೆ ಭ್ರಷ್ಟ ಆಚಾರಗಳನ್ನು ಕದ್ದು-ಮುಚ್ಚಿ ಪರಿಪಾಲಿಸಿದರೂ, ಕೈಗೆ ಬೇಡಿ ನಿಶ್ಚಿತ. ನೋಡುತ್ತಿರುತ್ತಾರೆ ಸಹಸ್ರಾರು ಕಂದೀಲು ಹಿಡಿದು ಜನ. ಗೋಡೆಗಳೆಂಬುದು ನಿಮಿತ್ತ. ಅನುಭೋಗದ ಬದುಕು ಬೀದಿಗೆ ಬಂದಿದೆ. ಜೀವನ ಮೌಲ್ಯ ಅರಿಯದ ಜೀವಗಳು ಹೊಡೆದಾಡುತ್ತಿವೆ. ಇರಬೇಕಾದಲ್ಲಿ ಇಲ್ಲ ನಾಲ್ಕು ಗೋಡೆಗಳು. ...
Comments