Skip to main content

ಮುಂಡಾಜೆ ಎಂಬ ನಮ್ಮೂರು...

 ಡೂರು-ಮಂಗಳೂರು ರಾಜ್ಯ ಹೆದ್ದಾರಿಯ ಮೇಲೆ ಬೆಳ್ತಂಗಡಿ ತಾಲೂಕು ಕೇಂದ್ರದಿಂದ ಸುಮಾರು 14 ಕಿಲೋ ಮೀಟರ್ ಪೂರ್ವದಲ್ಲಿರುವ ಮಲೆನಾಡಿನ ಪುಟ್ಟ ಹಳ್ಳಿ.ಮುಂಡಾಜೆ ಸುಮಾರು 3608 ಎಕ್ರೆ ವಿಸ್ತಾರವಾಗಿದೆ.ಮಲೆನಾಡ ಹಳ್ಳಿಯೇ ಆಗಿದ್ದರೂ ವಿದ್ಯಾ ಸಂಸ್ಥೆಗಳು, ಸಾರಿಗೆ-ರಸ್ತೆ ಸೌಕರ್ಯಗಳು, ವಿದ್ಯುತ್ ಶಕ್ತಿ, ದೂರವಾಣಿ, ಅಂಗಡಿ-ಮುಂಗಟ್ಟುಗಳು, ನೀರಾವರಿ, ಆಸ್ಪತ್ರೆ, ಬೇಂಕ್, ಅಂಚೆ ಕಛೇರಿ ಮೊದಲಾದ ಆಧುನಿಕ ಸವಲತ್ತುಗಳನ್ನು ಹೊಂದಿರುವ ಕಾರಣ ಅಭಿವೃಧ್ಧಿಶೀಲ ಹಳ್ಳಿಯೆಂದು ಇದನ್ನು ಗುರುತಿಸಬಹುದು. 

ಹೆಸರಿನ ಮೂಲ:
ಮುಂಡಾಜೆ ಎಂಬ ಹೆಸರು ಊರಿಗೆ ಬಂದಿರುವ ಬಗ್ಗೆ ಹೆಚ್ಚಿನ ಪುರಾವೆಗಳೇನೂ ಇಲ್ಲ.ಆದರೆ ‘ಅಜೆ’-‘ಅಂಜೆ’ ಎಂಬ ಪದಗಳು ‘ನೀರಿರುವ ಸ್ಥಳ’ ಎಂಬ ಅರ್ಥ ಕೊಡುತ್ತವೆಂದು ಇತಿಹಾಸ ಸಂಶೋಧಕರು ಹೇಳುತ್ತಾರೆ.ಆ ದೃಷ್ಟಿಯಿಂದ ಮುಂಡಾಜೆ ಅಂದರೆ ಒಳ್ಳೆಯ ನೀರಿರುವ ಪ್ರದೇಶವೆಂದು ಅರ್ಥೈಸಬಹುದೇನೋ.ಇಲ್ಲಿ ಹರಿಯುವ ಮೃತ್ಯುಂಜಯ ನದಿ ಇದಕ್ಕೆ ಒಳ್ಳೆಯ ಸಾಕ್ಷಿ ಒದಗಿಸುತ್ತದೆ.ಬೇಸಿಗೆಯಲ್ಲೂ ಈ ನದಿ ಬತ್ತವುದಿಲ್ಲ. 

ಆಡಳಿತ:
ಮುಂಡಾಜೆ 19ನೇ ಶತಮಾನದ ಕೊನೆಯ ತನಕ ಬೈಲಂಗಡಿಯ ಮೂಲರಸರ ಆಳ್ವಿಕೆಗೆ ಒಳಪಟ್ಟಿತ್ತು. ಅನಂತರ ಸ್ವಾತಂತ್ರ್ಯ ಸಿಗುವ ತನಕ ಬ್ರಿಟೀಷರ ಆಳ್ವಿಕೆಗೆ ಒಳಪಟ್ಟಿತ್ತು.ಸ್ವಾತಂತ್ರ್ಯಾ ನಂತರ ಪಕ್ಕದ ಕಲ್ಮಜೆಯೊಡಗೂಡಿ ಜಂಟಿ ಗ್ರಾಮ ಪಂಚಾಯತ್ ಆಡಳಿತವಿತ್ತು.ಈಚೆಗೆ ಸ್ವತಂತ್ರವಾಗಿ ಮುಂಡಾಜೆ ಪಂಚಾಯತ್ ರಚನೆಯಾಗಿದ್ದು ಅಭಿವೃಧ್ಧಿ ಕಾರ್ಯಗಳು ಅದರಡಿ ನಡೆಯುತ್ತಿವೆ. 

ಜನಾಂಗ:
ಮಲೆಕುಡಿಯರು,ಪೂಜಾರಿಗಳು,ಜೈನರು,ಗೌಡರು,ಹೊಲೆಯರು,ಮೇರರು,ನಲಿಕೆಯವರು,ಪರವರು,ಮಡಿವಾಳರು,ಮೊಯ್ಲಿ,ಆಚಾರಿ ಮೊದಲಾದವರು ಇಲ್ಲಿನ ಮೂಲ ನಿವಾಸಿಗಳು.ತೌಳವ ಬ್ರಾಹ್ಮಣ ಮನೆತನವೊಂದು ಅತ್ಯಂತ ಪ್ರಾಚೀನ ಕಾಲದಲ್ಲಿ ಇದ್ದಂತೆ ಐತಿಹ್ಯವಿದೆ.ಆದರೆ ಸರ್ವ ಋತು ರಸ್ತೆಯ ರಚನೆಯಾಗಿ ಊರು ಅಭಿವೃಧ್ಧಿಗೊಳ್ಳುತ್ತ ಹೋದಂತೆ,ಮುಖ್ಯವಾಗಿ ಇಲ್ಲಿನ ಫಲವತ್ತಾದ ಭೂ ಭಾಗಕ್ಕೆ ಆಕರ್ಷಿತರಾಗಿ ದೂರದ ಊರುಗಳಿಂದ ಬೇರೆ ಬೇರೆ ಜಾತಿ ಧರ್ಮಗಳ ಜನ ಇಲ್ಲಿಗೆ ಬಂದರು.ಹಾಗೆ ಬಂದವರಲ್ಲಿ ರತ್ನಗಿರಿ ಪ್ರದೇಶದಿಂದ ವಲಸೆ ಬಂದ ಚಿತ್ಪಾವನ ಬ್ರಾಹ್ಮಣರು ಪ್ರಮುಖರು.ಅನಂತರದ ವರ್ಷಗಳಲ್ಲಿ ಶೆಟ್ಟರು,ನಾಯ್ಕರು,ಮುಸಲ್ಮಾನರು, ಕೇರಳದಿಂದ ಮಲೆಯಾಳಿ ಕ್ರೈಸ್ತರು,ಹವ್ಯಕ-ಕರಾಢ-ಕೋಟ-ಶಿವಳ್ಳಿ ಬ್ರಾಹ್ಮಣರು ಆಗಮಿಸಿದರು.ಈ ವಲಸೆ ಇಂದಿಗೂ ನಡೆಯುತ್ತಲೇ ಇದೆ.
 

ಬೆಳೆ-ನೀರಾವರಿ :
ಬಹು ಪ್ರಾಚೀನ ಕಾಲದಲ್ಲಿ ಭತ್ತದ ಬೆಳೆಯೇ ಇಲ್ಲಿನ ಮುಖ್ಯ ವ್ಯವಸಾಯವಾಗಿರಬೇಕು.ಗದ್ದೆಯ ಹುಣಿಗಳಲ್ಲಿ ತೆಂಗಿನ ಮರಗಳನ್ನು ಬೆಳೆಸುತ್ತಿದ್ದಿರಬಹುದು.ಮುಂದೆ ಚಿತ್ಪಾವನ ಬ್ರಾಹ್ಮಣರ ಆಗಮನದೊಂದಿಗೆ ಭತ್ತದ ಜತೆಗೆ ಅಡಿಕೆಯೂ ಇಲ್ಲಿನ ಮುಖ್ಯ ಬೆಳೆಯಾಗಿ ಮುಂದುವರಿದಂತೆ ಕಾಣುತ್ತದೆ.ಇಲ್ಲಿನ ಮುಖ್ಖ ವಾಹಿನಿಯಾದ ಮೃತ್ಯುಂಜಯಾದ ಇಕ್ಕೆಲಗಳಲ್ಲಿ ನೆಲೆಸಿರುವ ಚಿತ್ಪಾವನರು ಈ ನದಿಗೆ ಕಾಪಿನ ಬಾಗಿಲು ಎಂಬಲ್ಲಿ ಕಲ್ಲು-ಮಣ್ಣು-ಸೊಪ್ಪಿನಿಂದ ಎರಡು ಕಟ್ಟಗಳನ್ನು ಕಟ್ಟಿ ನದಿಯ  ಎಡ ಬಲಗಳಲ್ಲಿ ಉದ್ದವಾದ ಕಾಲುವೆಗಳ ಮೂಲಕ ತೋಟಗಳಿಗೆ ನೀರುಣಿಸಿದರು.ಮುಂಡಾಜೆ ಮತ್ತು ಮಜಲು ವಾಳ್ಯಗಳಲ್ಲಿರುವ ಅಡಿಕೆ ಕೃಷಿಗೆ ಈ ಕಾಲುವೆಗಳಲ್ಲಿ ಹರಿಯುವ ನೀರೇ ಇಂದಿಗೂ ಆಧಾರ.ಹಾಗೆಯೇ ಮುಂಡಾಜೆ ಮಧ್ಯ ಭಾಗದಲ್ಲಿರು ಸೇತುವೆಯ ಬಳಿ ಇನ್ನೊಂದು ಕಟ್ಟವನ್ನು ಕಟ್ಟಿ ಕಡಂಬಳ್ಳಿ ವಾಳ್ಯಕ್ಕೆ ಮತ್ತು ಗ್ರಾಮದ ಗಡಿಯಾದ ನಿಡಿಗಲ್ ನಲ್ಲಿ ಹರಿಯುವ ನೇತ್ರಾವತಿ ನದಿಗೆ ಕಟ್ಟ ಕಟ್ಟಿ ಕಾಯರ್ತೋಡಿ ವಾಳ್ಯದ ಅಡಿಕೆ ತೋಟಗಳಿಗೆ ನೀರು ಸಿಗುವಂತೆ ಮಾಡಿಕೊಂಡರು.ವಾಳ್ಯಗಳ  ಎಲ್ಲ ಅಡಿಕೆ ತೋಟಗಳಿಗೆ ಅಲಿಖಿತವಾದ ಒಂದು ಸೂತ್ರ ರೂಪದಲ್ಲಿ ಇಂದಿಗೂ ನೀರಿನ ಹಂಚಿಕೆಯಾಗುತ್ತಿರುವುದು ಇಲ್ಲಿನ ಒಂದು ವೈಶಿಷ್ಟ್ಯ.ಕಾಪಿನ ಬಾಗಿಲಿನ ಬಳಿ ಮಣ್ಣಿನ ಕಟ್ಟದ ಬದಲಾಗಿ ವೆಂಟೆಡ್ ಡ್ಯಾಮ್ ಕಟ್ಟಲಾಗಿದೆ.ಅಡಿಕೆಯ ಹೊರತಾಗಿ ತೆಂಗು,ಗೇರು, ಬಾಳೆ,ಮರ ಗೆಣಸು,ಕೊಕ್ಕೊ,ರಬ್ಬರ್,ಭತ್ತ ಇಲ್ಲಿನ ಇತರೆ ಬೆಳೆಗಳು.
ಸಾಂಸ್ಕ್ರತಿಕ ಪರಂಪರೆ:
ಇಲ್ಲಿನ ಜನತೆಗೆ ಬಹುದೊಡ್ಡ ಸಾಂಸ್ಕ್ರತಿಕ ಹಿನ್ನೆಲೆಯಿದೆ.ಬಹಳ ಹಿಂದಿನಿಂದಲೂ ಇಲ್ಲಿನ ಜನ ತಮ್ಮನ್ನು ಯಕ್ಷಗಾನ,ತಾಳ ಮದ್ದಲೆ,ನಾಟಕ,ಸಂಗೀತ,ಚಿತ್ರಕಲೆ,ಶಿಲ್ಪ ಕಲೆ,ಕಾಷ್ಠ ಶಿಲ್ಪ,ಕಾವ್ಯ-ಸಾಹಿತ್ಯ ಮುಂತಾದ ಕಲೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.ಅಖಿಲ ಭಾರತ ಖ್ಯಾತೀಯ ನಾಟ್ಯ ಕಲಾವಿಶಾರದ ರಂಗನಾಥ ತಾಮ್ಹನಕರ್ ಮುಂಡಾಜೆಯವರು.ಇವರ ‘ಅಂಬಾ ಪ್ರಸಾದಿತ ನಾಟಕ ಮಂಡಳಿ’ ಕರ್ನಾಟಕದಾದ್ಯಂತ ನಾಟಕ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಎಬ್ಬಸಿತ್ತು.ಗುದ್ಲಿ ರಾಮಕೃಷ್ಣ ಭಟ್ಟರು,ಗೋರೆ ಅನಂತ ಭಟ್ಟರು,ಕೊಚ್ಚಿ ಸುಬ್ರಾಯ ಭಟ್ಟರು,ಫಟ್ಲ ಪದ್ಮನಾಭ ಭಟ್ಟರು,ಬ್ರಹ್ಮಯ್ಯ ಹೆಗ್ಗಡೆ ಮೊದಲಾದವರು ಇಲ್ಲಿನ ಪ್ರಾಚೀನ ಯಕ್ಷಗಾನ ದಿಗ್ಗಜರು,ತಾಮ್ಹನಕರ್ ಮನೆತನ ಸಂಗೀತಕ್ಕೆ ಪ್ರಸಿದ್ಧವಾಗಿದೆ.ಶ್ರೀಗಳಾದ ಎಂ.ಸಂಜೀವ, ಕೆ.ಬಿ. ಆಠವಳೆ,ಕೆ. ವಿಠ್ಠಲ ರಾವ್,ದಿ.ಸುಬ್ರಾಯ ಅನಂತ ಗೋಖಲೆ ಮೊದಲಾದ ಹಿರಿಯರಿಂದಲೂ, ವೃತ್ತಿಪರ ಯಕ್ಷಗಾನ ಕಲಾವಿದರಾದ ಸದಾಶಿವ ಶೆಟ್ಟಿ,ಕೆ. ನಾರಾಯಣ ಗೌಡ,ನವೀನ್ ಶೆಟ್ಟಿ ಮೊದಲಾದ ಯುವ ಕಲಾವಿದರಿಂದ ಈ ಪರಂಪರೆ ಮುನ್ನಡೆದಿದೆ.ಶ್ರೀ ನಾರಾಯಣ ಪಟವರ್ಧನ್ ಹೆಸರಿಸಬಹುದಾದ ಒರ್ವ ಕಾಷ್ಠ ಮತ್ತು ಶಿಲ್ಪ ಕಲಾವಿದರು.ಡಾ|ಶ್ರೀನಿವಾಸ ರಾವ್,ಡೋಂಗ್ರೆ ಲಕ್ಷ್ಮಣ ಭಟ್,ಹೆಚ್.ಎಸ್.ಖಾಡಿಲ್ಕಾರ್,ಜಿ.ಎನ್,ಭಿಡೆ ಮೊದಲಾದ ಸಾಹಿತ್ಯ ಕ್ಷೇತ್ರವನ್ನು ಬೆಳಗಿದವರು.ಎಮ್.  ರಾಮಚಂದ್ರ ಭಟ್ಟರು ಬಾಲ ಸಾಹಿತ್ಯವನ್ನು ಬೆಳೆಸಿ ಪೋಷಿಸಿದವರು. 

ಸಾರ್ವಜನಿಕ ಸೇವೆ-ರಾಜಕಾರಣ-ಸಹಕಾರ ಕ್ಷೇತ್ರ:
ದಿ| ಭಿಡೆ ನಾರಾಯಣ ಭಟ್ಟರು ಟ್ರಸ್ಟ್ ಒಂದನ್ನು ಸ್ಥಾಪಿಸಿ ಊರಿನಲ್ಲಿ ವಿದ್ಯೆ,ಆರೋಗ್ಯ,ಸಹಕಾರ ಮೊದಲಾದ ಸಾರ್ವಜನಿಕ ಸೇವೆಗೆ ತಳಹದಿಯನ್ನು ಹಾಕಿದರು.ದಿ| ಎಂ.ಎನ್.ಭಿಡೆಯವರು ಸಾತಂತ್ರ್ಯ ಪೂರ್ವದಲ್ಲೇ ಅಖಿಲ ಭಾರತ ಕಾಂಗ್ರೆಸ್ ಕಮಿಟಿಯ ಸದಸ್ಯರಾಗಿದ್ದರು.ಮಹಾಳಿ ರೋಗದಿಂದಾಗಿ ಅಡಿಕೆ ಬೆಳೆ ವಿನಾಶದಲ್ಲಿದ್ದಾಗ ಅಖಿಲ ಭಾರತ ಅಡಿಕೆ ಫೆಡರೇಶನ್ ಸ್ಥಾಪಿಸಿ ಬೆಳೆಗಾರರಿಗೆ ನೆರವಾದರು.ಅಲ್ಲದೇ,ರಸ ವಿದ್ಯೆಯಲ್ಲಿ ಬಹಳ ಸಂಶೋಧನೆ ಮಾಡಿದವರೂ,ಉತ್ತಮ ಆಯುರ್ವೇದ ವೈದ್ಯರೂ ಆಗಿದ್ದರು.ದಿ| ಜಿ.ಎನ್. ಭಿಡೆಯವರು ಬೆಳ್ತಂಗಡಿ ತಾಲೂಕು ಬೋರ್ಡಿಗೆ ಅಧ್ಯಕ್ಷರಾಗಿದ್ದರು.ಅಲ್ಲದೇ,ಅನೇಕ ಸಂಘ-ಸಂಸ್ಥೆಗಳಲ್ಲಿ ದುಡಿದವರು.ಮುಂಡಾಜೆಗೆ ಪ್ರಾಥಮಿಕ ಶಾಲೆ,ಪ್ರೌಢ ಶಾಲೆ,ಪದವಿ ಪೂರ್ವ ಕಾಲೇಜು,ಆಂಗ್ಲ ಮಾಧ್ಯಮ ಶಾಲೆಯನ್ನು ನೀಡಿದರು.ಇಲ್ಲಿ ಸಹಕಾರಿ ಸಂಘವನ್ನು ಸ್ಥಾಪಿಸುವಲ್ಲಿ ದಿ| ಎನ್.ಪಿ.ಖಾಡಿಲ್ಕರರ ಕೊಡುಗೆ ದೊಡ್ಡದು.ಹಾಗೆಯೇ ಮಾಣಿ ಫಡ್ಕೆ ಮನೆತನದ ದಿ| ಗಣಪತಿ ಭಟ್ಟರ ಸುಪುತ್ರರಾದ ದಿ| ಆರ್.ಜಿ.ಫಡ್ಕೆ ಹಾಗೂ ದಿ| ಎಂ.ಜಿ ಫಡ್ಕೆಯವರೂ ಹಲವು ವರ್ಷಗಳ ಕಾಲ ಸಹಕಾರೀ ಬ್ಯಾಂಕಿನ ಅಧ್ಯಕ್ಷರೂ,ಪಂಚಾಯತ್ ಬೋರ್ಡ್ ಅಧ್ಯಕ್ಷರೂ ಆಗಿ ಊರಿಗೆ ಹತ್ತಾರು ಆಧುನಿಕ ಸೌಕರ್ಯಗಳನ್ನು ಒದಗಿಸುವಲ್ಲಿ ನೆರವಾಗಿದ್ದಾರೆ. 

ಅನ್ಯ ವಿವರಗಳು:
ಮುಂಡಾಜೆ ಸರ್ವಧರ್ಮ ಸಹಿಷ್ಣುತೆಗೆ ಹೆಸರಾಗಿದ್ದು ಇಲ್ಲಿ ವಾಸಿಸುವ ಎಲ್ಲಾ ಧರ್ಮಗಳ ಜನರು ಸೌಹಾರ್ದಪೂರ್ಣ ಜೀವನ ನಡೆಸುತ್ತಿದ್ದಾರೆ. ಇಂದು ಇಲ್ಲಿ ನಾಲ್ಕು ದೇವಸ್ಥಾನಗಳು, ಒಂದು ದೈವಸ್ಥಾನ, ಒಂದು ಇಗರ್ಜಿ, ಒಂದು ಮಸೀದಿ ಇದೆ. ಒಂದು ಸಹಕಾರಿ ಬ್ಯಾಂಕ್, ಒಂದು ವಿಜಯಾ ಬ್ಯಾಂಕ್ ಶಾಖೆ, ಒಂದು ಹಾಲು ಸಹಕಾರಿ ಸಂಘ, ಒಂದು ಅಂಚೆ ಕಛೇರಿ, ಒಂದು ಆರೋಗ್ಯ ಕೇಂದ್ರ, ಒಂದು ಪಂಚಾಯತ್ ಕಛೇರಿ, ಐದು ಶೈಕ್ಷಣಿಕ ಸಂಸ್ಥೆಗಳು,ಒಂದು ನವೋದಯ ಸನಿವಾಸ ಶಾಲೆ, ಎರಡು ವಿದ್ಯಾರ್ಥಿ ನಿಲಯಗಳು ಇವೆ. ಇದಲ್ಲದೇ ಯುವಕ ಮಂಡಲ,ಯುವತಿ ಮಂಡಲ,ಮಹಿಳಾ ಮಂಡಲ, ಕ್ರೀಡಾ ಸಂಘ ಇವೆ. ಇಲ್ಲಿನ ನೂರಾರು ಮಂದಿ ಯುವಕ-ಯುವತಿಯರು ಉತ್ತಮ ವಿದ್ಯಾವಂತರಾಗಿ ದೇಶ-ವಿದೇಶಗಳಲ್ಲಿ ಡಾಕ್ಟರ್,ಎಂಜಿನೀಯರ್, ಶಿಕ್ಷಕ,ವಕೀಲ,ಯೋಧ ಮೊದಲಾದ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿದ್ದು ಊರಿಗೆ ಒಳ್ಳೆಯ ಹೆಸರು ತರುವಲ್ಲಿ ಶ್ರಮಿಸುತ್ತಿದ್ದಾರೆ.

Comments

Popular posts from this blog

ಮಾದಕ ಅಧ್ವಾನ

ಧೂ ಮಪಾನ, ಮದ್ಯಪಾನದಂತೆ ಮಾದಕ ದ್ರವ್ಯ ಸೇವನೆಯ ಚಟ ಹೊಸ ತಲೆಮಾರಿನ ಯುವಕ/ಯುವತಿಯರಲ್ಲಿ ವಿದೇಶಿ ಮೋಹದಂತೆ ಸದ್ದಿಲ್ಲದೆ ಹರಡುತ್ತಿದೆ. ಷೋಕಿಗಾಗಿ, ದೈಹಿಕ ಮತ್ತು ಮಾನಸಿಕ ನೋವಿನಿಂದ ಕೆಲ ಕ್ಷಣ ದೂರವಾಗಲು ಇದರ ಬಳಕೆಯಾಗುತ್ತಿದೆ. ಇದಕ್ಕೆ ದಾಸರಾಗುವವರಲ್ಲಿ ಹೆಚ್ಚಿನವರು 18 ರಿಂದ 30 ವರ್ಷದೊಳಗಿನವರು. ಜಗತ್ತಿನೆಲ್ಲೆಡೆ ಸುಮಾರು 500 ಬಿಲಿಯನ್ ಮೊತ್ತದ ಮಾದಕ ವಸ್ತುಗಳ ವಹಿವಾಟು ನಡೆಯುತ್ತದೆ. ಪೆಟ್ರೋಲಿಯಂ ಮತ್ತು ಶಸ್ತ್ರಾಸ್ತ್ರ ಉದ್ದಿಮೆಯ ನಂತರದ ಸ್ಥಾನ ದಕ್ಕಿದೆ! ಪ್ರತಿಷ್ಠೆ ಎಂದುಕೊಂಡಿರುವ ಯುವ ಜನಾಂಗದ ಮೊಂಡುತನ, ಸಾವಿನ ಬಾಗಿಲು ತಟ್ಟುವಂತೆಯೂ ಮಾಡಿದೆ. ದೇಶದಲ್ಲಿ ಸುಮಾರು ಒಂದು ಕೋಟಿ ಹೆರಾಯಿನ್ ವ್ಯಸನಿಗಳಿದ್ದಾರೆ. ಕೆಲ ತಿಂಗಳ ಹಿಂದೆ, ಮಂಗಳೂರಿನ ವಿದ್ಯಾರ್ಥಿನಿಯೋರ್ವಳು ಈ ದುಷ್ಚಟಕ್ಕೆ ಬಲಿಯಾದ ಘಟನೆ ನಮ್ಮ ಮುಂದಿದೆ. ನೆರೆಯ ಪಾಕಿಸ್ತಾನದಿಂದ ಇದರ ವ್ಯವಸ್ಥಿತ ಸರಬರಾಜು ನಡೆಯುತ್ತಿದೆ ಎಂಬ ಗುಮಾನಿಯೂ ಇದೆ. ಅದರಲ್ಲೂ ಕರಾವಳಿ ಪ್ರದೇಶ ವಾಮಮಾರ್ಗ ಕರುಣಿಸಿ ಡ್ರಗ್ ಮಾಫಿಯಾಕ್ಕೆ ತೆರೆದುಕೊಂಡಿದೆ. ಹಾಗಿದ್ದರೆ, ಡ್ರಗ್ಸ್ ಅಥವಾ ಮಾದಕ ವಸ್ತುಗಳ ಕುರಿತಾದ ಪಕ್ಷಿ ನೋಟ ಇಲ್ಲಿದೆ. ಮಾನಸಿಕ ಮತ್ತು ದೈಹಿಕ ಬದಲಾವಣೆಗೆ ಕಾರಣವಾಗುವ ವಸ್ತುಗಳಿಗೆ ಮಾದಕ ವಸ್ತು ಎನ್ನಲಾಗುತ್ತದೆ. ಇದು ಘನ, ದ್ರವ ಅಥವಾ ಅನಿಲ ರೂಪದಲ್ಲಿರುತ್ತದೆ. ವ್ಯಕ್ತಿಯ ನರಮಂಡಲದ ಮೇಲೆ ಪ್ರಭಾವ ಬೀರುವ ಮೂರು ಮುಖ್ಯ ಮಾದಕ ವಸ್ತುಗಳ ವಿಧಗಳು: ಡಿಪ...

ಯುವ ಜನತೆ ಮತ್ತು ಸಾಮಾಜಿಕ ತಾಣಗಳು

        ಸಂ ಪರ್ಕ ಮಾಧ್ಯಮಗಳು ಒಂದೆರಡಲ್ಲ,ಹಲವು ಬಗೆಯವು.ಅನಾದಿಕಾಲದಿಂದಲೂ ಇಂತಹ ಮಾಧ್ಯಮಗಳು ಜಾರಿಯಲ್ಲಿವೆ. ಕಾಲ ಬದಲಾದಂತೆ ಶೀಘ್ರ ಸಂಪರ್ಕ ಕಲ್ಪಿಸಬಹುದಾದ ಸಾಧನಗಳು ಬರಲಾರಂಭಿಸಿದವು.ಇಂದಿನ ಈ-ಮೇಲ್,ಸಾಮಾಜಿಕ ತಾಣಗಳು (ಫೇಸ್ ಬುಕ್,ಟ್ವಿಟ್ಟರ್..) ಪ್ರಚಲಿತ ಸಾಧನಗಳು.ಆದರೆ ಸಾಂಪ್ರದಾಯಿಕ ಪತ್ರ ವ್ಯವಹಾರಕ್ಕೆ ಇದ್ದ ಗೈರತ್ತು ಈ ಮಾಧ್ಯಮಗಳಲ್ಲಿ ಕಾಣುವುದು ಕಷ್ಟ.ಆದರೆ ಹೊಸತನಕ್ಕೆ ಅಂಟಿಕೊಳ್ಳುವ ಅನಿವಾರ್ಯತೆ ಬೇರೆಯದೇ ಪ್ರಪಂಚಕ್ಕೆ ಕರೆದೊಯ್ಯುತ್ತವೆ.ಎಲ್ಲೋ-ಎಂದೋ ಭೇಟಿಯಾದವರು, ಯಾವುದೋ ಊರಿನಲ್ಲಿರುವವರು ಹೀಗೆ ಹತ್ತು ಹಲವು ಕಾರಣಗಳಿಂದ ದೂರವಾದವರನ್ನು ಹತ್ತಿರಕ್ಕೆ,ಸದಾ ಸಂಪರ್ಕದಲ್ಲಿರುವಂತೆ ಮಾಡುವ ಛಾತಿ ಸಾಮಾಜಿಕ ತಾಣಗಳಂತಹ ಅಂತರ್ಜಾಲ ಸಂಬಂಧಿ ವ್ಯವಸ್ಥೆಗಳಿಗಿವೆ.ವಯಸ್ಸಿನ ಅಂತರವಿಲ್ಲದೇ ಎಲ್ಲರನ್ನು ಆಕರ್ಷಿಸುವ ತಾಣಗಳು ಮನೆ-ಮನಗಳಲ್ಲಿ ಹಸುರಾಗಿವೆ.ಇವುಗಳ ಬಳಕೆ ಹೆಚ್ಚಾಗುತ್ತಲೇ ಇದೆ.ಒಂದು ಘಳಿಗೆಯೂ ಬಿಟ್ಟು ಇರಲಾರದಷ್ಟು ಪ್ರಭಾವ ಬೀರಿವೆ.ಭಾರತ ಫೇಸ್ ಬುಕ್ ಬಳಕೆಯಲ್ಲಿ ವಿಶ್ವದಲ್ಲೇ ಮೂರನೇ ಸ್ಥಾನದಲ್ಲಿದೆ.        ಯುವ ಜನಾಂಗ ಈ ತಾಣಗಳ ಅತಿ ಹೆಚ್ಚು ಬಳಕೆ ಮಾಡುತ್ತಿರುವುದು ಗೊತ್ತಿರುವ ವಿಚಾರವೆ.ಗೆಳೆಯರ ಬಳಗ ಕಟ್ಟಿಕೊಳ್ಳುವ ಆಸಕ್ತಿ ಹೆಚ್ಚಿಸುತ್ತಿರುವ ಸಾಮಾಜಿಕ ತಾಣಗಳು ಓದಿನ ಮೇಲಿರಬೇಕಾದ ಗಮನ ಕುಂಠಿತಗೊಳಿಸುತ್ತಿದೆ ಎಂಬ ಅಭಿಪ್ರಾಯಗಳು ಕೇಳಿಬರು...

ವ್ಯವಸ್ಥೆ ಬದಲಾಗಬೇಕಿದೆ

ಸ ಮಾಜದ ನಾನಾ ಸ್ತರದ ಜನರ ಜೊತೆ ಒಡನಾಟ ಮತ್ತು ಬಾಂಧವ್ಯ ವೃದ್ಧಿಗೆ ಸಹಾಯವಾಗುವ ಆದರ್ಶ ಗುಣಗಳು ಪ್ರಕೃತಿದತ್ತವಾಗಿ ಸಿಗುವ ವಸ್ತುಗಳೇನೂ ಅಲ್ಲ. ಅಥವಾ ಹುಟ್ಟು ಗುಣವಾಗಿಯೂ ಬರುವಂಥದಲ್ಲ. ಈ ದೇಶದಲ್ಲಿ ಆದರ್ಶ ಪ್ರಾಯರಾಗಿ ಬಾಳಿ ಬದುಕಿದವರ ಸಂಖ್ಯೆಯೂ ತುಂಬಾ ದೊಡ್ಡದಿದೆ. ಆದರೆ ಪ್ರಸ್ತುತ, ಸತ್ಪ್ರಜೆಯಾಗಿ ಉಳಿಯುವುದು ಕಷ್ಟವಾಗುತ್ತಿದೆ. ಹದಗೆಟ್ಟ ಪ್ರಜಾಸತಾತ್ಮಕ ವ್ಯವಸ್ಥೆ, ಅರಾಜಕೀಯತೆ ಒಳ್ಳೆಯವರನ್ನೂ ಕತ್ತಲಿಗೆ ತಳ್ಳುತ್ತಿದೆ. ಸುಲಭ, ಸಸೂತ್ರ ಮತ್ತು ಪಾರದರ್ಶಕತೆ ಕಲ್ಪಿಸಲಿರುವ ವ್ಯವಸ್ಥೆಗಳು ವ್ಯಕ್ತಿ-ಅಭಿಪ್ರಾಯ-ಅಭಿರುಚಿಗೆ ಸಿಲುಕಿ ಕ್ಷೀಣವಾಗಿ ಹೋಗಿವೆ. ಒಟ್ಟು ಸಮಾಜವನ್ನು ಸರಿ ದಾರಿಯಲ್ಲಿ ಕೊಂಡೊಯ್ಯಬೇಕಾದವರೇ ಅಡ್ಡದಾರಿ ಹಿಡಿಯುತ್ತಿರುವುದು ದುರಂತ. ನಾವು ಭಾರತೀಯರೆಂದು ಭಾಷಣ ಬಿಗಿಯುವಾಗ ಎದೆ ತಟ್ಟಿ ಹೇಳಿ ಕೊಳ್ಳುತ್ತೇವೆಯಾದರೂ, ನಮ್ಮಲ್ಲಿ ಒಂದು ಕೀಳರಿಮೆ ಇದ್ದೇ ಇದೆ. ಸಮಯ ಪ್ರಜ್ಞೆ, ಕಾಲೆಳೆಯುವುದು, ಯಶಸ್ಸು ಮತ್ತು ಸಾಧನೆಗಳನ್ನು ಪ್ರೊತ್ಸಾಹಿಸದೇ ಇರುವಂತಹ ಅನೇಕ ನಡೆಗಳು ನಮ್ಮೊಳಗೆ ತಾನಾಗಿಯೇ ಬೆಳೆದು ಬಿಟ್ಟಿದೆ. ಈ ಕುರಿತಾದ ಚರ್ಚೆಗಳಲ್ಲೆಲ್ಲಾ ಅಂತಿಮವಾಗಿ ಶಿಕ್ಷಣದ ಕೊರತೆಯಿದೆ ಎಂಬ ನಿರ್ಧಾರಕ್ಕೆ ಬರಲಾಗುತ್ತದೆ. ಆದರೆ ನಾಗರಿಕ ಜೀವನ ನಡೆಸಲು ಶಿಕ್ಷಣದ ಜೊತೆಗೆ ಕಾನೂನು ಮತ್ತು ಸಾಮಾಜಿಕ ವ್ಯವಸ್ಥೆಗಳು ಸರಿಯಾದ ರೀತಿಯಲ್ಲಿ ಜಾರಿಗೆ ಬರಬೇಕಿದೆ. ನಿಜಕ್ಕೂ ಭಾರತದಲ್ಲಿ ಈ ಕುರಿತಾದ ಸಮಗ್ರ ವಿಮರ್ಶೆಯ ಅ...