Skip to main content

ರಾಜಕೀಯದ ‘ಬಂಡವಾಳ’



ಧಿಕಾರದ ಚುಕ್ಕಾಣಿ ಹಿಡಿಯಲು, ರಾಜಕೀಯ ಪಕ್ಷಗಳಿಗೆ ಜನರ ಬೆಂಬಲ ಅವಶ್ಯಕ. ವಿವಿಧ ಆಶೋತ್ತರಗಳನ್ನು ಈಡೇರಿಸುವ ವಾಗ್ದಾನ ಮಾಡುವ ಇವರಿಗೆ, ಕಿಂಚಿತ್ತು ಸಹಾಯ ಮಾಡುವ ಅವಕಾಶ ನಮ್ಮ ಸಂವಿಧಾನ ಕೊಟ್ಟಿದೆ. ಪ್ರಜಾಪ್ರಭುತ್ವದ ದೃಷ್ಟಿಯಿಂದಲೂ, ನಾಗರಿಕರ ಹಕ್ಕು ಕೇವಲ ಮತದಾನಕಷ್ಟೇ ಸೀಮಿತವಾಗಬಾರದು. ಹಾಗಾಗಿ ಅರ್ಹ ವ್ಯಕ್ತಿ ಯಾ ಪಕ್ಷಕ್ಕೆ ದೇಣಿಗೆಯ ರೂಪದಲ್ಲಿ ಹಣದ ನೆರವನ್ನು ನೀಡಬಹುದು. ಆದರೆ, ಇತ್ತೀಚೆಗೆ ಸಂತ್ರಸ್ತರ ಪರಿಹಾರ ನಿಧಿಗೆ ಅಥವಾ ಸಮಾಜ ಸೇವೆಗೆ ಸಂದಾಯವಾಗುವ ಹಣಕ್ಕಿಂತ ಹೆಚ್ಚು ರಾಜಕೀಯ ಪಕ್ಷಗಳ ಪಾಲಾಗುತ್ತಿದೆ. ಸ್ವಾರ್ಥ ರಕ್ಷಣೆಗಾಗಿ, ಬೃಹತ್ ಉದ್ದಿಮೆದಾರರ ಕಪಿಮುಷ್ಠಿಯಲ್ಲಿ ಪಕ್ಷಗಳು ನಲುಗುತ್ತಿವೆ. ಇದರ ಇನ್ನೊಂದು ಮುಖವೆಂಬಂತೆ ಅಭ್ಯರ್ಥಿ ಯಾ ಪಕ್ಷಕ್ಕೆ ಹಣದ ಹೊಳೆ ಹರಿಯುತ್ತಿದೆ.
ಸ್ವಾತಂತ್ರ್ಯ ಪೂರ್ವದಲ್ಲೂ, ಉದ್ಯಮರಂಗ ಚುನಾವಣೆಯ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿತ್ತು. ಸದಸ್ಯತ್ವ ಶುಲ್ಕ ಮತ್ತು ವೈಯುಕ್ತಿಕ ದೇಣಿಗೆಯಿಂದ ಚುನಾವಣೆಯ ವೆಚ್ಚ ಭರಿಸಲು ಪಕ್ಷಗಳಿಗೆ ಸಾಧ್ಯವಾಗದೇ ಇದ್ದುದ್ದು ಇದಕ್ಕೆ ಪ್ರಮುಖ ಕಾರಣ. ಕಾಲಕ್ರಮೇಣ ಚುನಾವಣೆಯ ಸಿದ್ಧತೆ ಮತ್ತು ಕಾರ್ಯಗತಗೊಳಿಸುವುದು ದುಬಾರಿಯಾಗುತ್ತಾ ಹೋಯಿತು. 2009ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಗೆ ಸರ್ಕಾರ ಸುಮಾರು 1120 ಕೋಟಿ ರೂಪಾಯಿ ವ್ಯಯಿಸಿದೆ. ಅಲ್ಲದೇ, ವಿವಿಧ ಅಭ್ಯರ್ಥಿ ಮತ್ತು ಪಕ್ಷಗಳು ಒಟ್ಟು ಸುಮಾರು 14 ಸಾವಿರ ಕೋಟಿ ಖರ್ಚು ಮಾಡಿರುವುದು ಅಂದಾಜಿಸಲಾಗಿದೆ. ಹೀಗಾಗಿ, ರಾಜಕೀಯ ಪಕ್ಷಗಳು ಹೆಚ್ಚಿನ ಹಣವನ್ನು ಕಂಪನಿಗಳಿಂದ ಪಡೆಯುತ್ತಿವೆ. ಈ ಸಲುವಾಗಿ, 1960ರಲ್ಲಿ ಕಂಪನಿ ಕಾಯ್ದೆಯನ್ನು ಜಾರಿಗೊಳಿಸಲಾಯಿತು. ಕಂಪನಿಗಳು ನಿಗದಿತ ಮೊತ್ತದಷ್ಟು ಹಣವನ್ನು ಪಕ್ಷಗಳಿಗೆ ನೀಡಬಹುದೆಂದು ಕಾಯ್ದೆ ಉಲ್ಲೇಖಿಸಿತ್ತು. ಆದರೆ ಇದು ಸಣ್ಣ ಮತ್ತು ಮಧ್ಯಮ ಉದ್ಯಮಿಗಳ ಕೆಂಗಣ್ಣಿಗೆ ಗುರಿಯಾಯಿತು. ಸರ್ಕಾರ ಕೇವಲ ತನಗೆ ಸಹಕರಿಸಿದ ಬೃಹತ್ ಉದ್ದಿಮೆದಾರರ ಹಿತ ಕಾಪಾಡುವಲ್ಲಿ ಶಾಮೀಲಾಯಿತು. ಹೀಗೆ ಟೀಕೆಗೊಳಪಟ್ಟ ಕಾಯ್ದೆಗೆ 1969ರಲ್ಲಿ ತಿದ್ದುಪಡಿ ತರಲಾಯಿತು. ಈ ತಿದ್ದುಪಡಿ, ರಾಜಕೀಯ ಪಕ್ಷಗಳಿಗೆ ಹಣ ಪೂರೈಸುವುದು ಶಿಕ್ಷಾರ್ಹ ಅಪರಾಧವೆಂದು ಪರಿಗಣಿಸಿತು. ಆದರೆ, ಈ ‘ದೇಣಿಗೆ’ಯಿಂದ ಪಕ್ಷ ಮತ್ತು ಕಂಪನಿಗಳಿಗೆ ಪ್ರಯೋಜನವಿತ್ತು. ಆದ್ದರಿಂದ, ಅಕ್ರಮವಾಗಿ ಹಣ ರವಾನಿಸುವ ಚಟುವಟಿಕೆಗಳು ಶುರುವಾದವು. 1985ರಲ್ಲಿ ಮತ್ತೊಂದು ತಿದ್ದುಪಡಿ ತರಲಾಯಿತಾದರೂ ಪರಿಣಾಮ ಬೀರಲಿಲ್ಲ.
ಚುನಾವಣೆಯ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ತರಲು, 2003ರಲ್ಲಿ ಚುನಾವಣೆ ಮತ್ತು ಸಂಬಂಧಿತ ಕಾಯ್ದೆಗಳಿಗೆ ತಿದ್ದುಪಡಿ ತರಲಾಯಿತು. ಇದು, ಚುನಾವಣೆಯ ಒಟ್ಟು ವೆಚ್ಚದಲ್ಲಿ, ಪಕ್ಷ ಮತ್ತು ಬೆಂಬಲಿಗರು ಮಾಡುವ ಖರ್ಚು ಒಳಗೊಂಡಿರುತ್ತದೆಂದು ಸ್ಪಷ್ಟಪಡಿಸಿದೆ. ಜೊತೆಗೆ, ಚೆಕ್ ಮೂಲಕ ಪಕ್ಷಕ್ಕೆ ನೀಡುವ ಹಣಕ್ಕೆ ತೆರಿಗೆ ವಿನಾಯಿತಿಯನ್ನೂ ಘೋಷಿಸಿದೆ. ಆದರೆ ಕಂಪನಿಗಳಿಗೆ, ತಾವು ದೇಣಿಗೆ ನೀಡದೇ ಇರುವ ಪಕ್ಷಗಳ ಪ್ರತಿಕಾರದ ಭಯ ಕಾಡಿತ್ತು. ಇದಕ್ಕೆ ಪರಿಹಾರವೆಂಬಂತೆ, ದೇಶದ ಪ್ರತಿಷ್ಠತ ಉದ್ಯಮಿಗಳು ಸ್ವತಂತ್ರ ಸಂಸ್ಥೆಗಳನ್ನು ಕಟ್ಟಲು ಮುಂದಾದವು. ಮುಖ್ಯವಾಗಿ, ವೇದಾಂತ ಸಮೂಹ, ಭಾರ್ತಿ ಸಮೂಹ, ರಿಲಾಯನ್ಸ್ ಸಮೂಹ ಮತ್ತು ಕೆಕೆ ಬಿರ್ಲಾ ಸಮೂಹ ಕಂಪನಿಗಳು ತಮ್ಮ-ತಮ್ಮ ‘ಇಲೆಕ್ಟೋರಲ್ ಟ್ರಸ್ಟ್’ಗಳನ್ನು ಹೊಂದಿವೆ. ಇವು 2013ರ ಹೊಸ ಕಂಪನಿ ಕಾಯ್ದೆಯ ಪರಿಚ್ಛೇದ 8ರ ಪ್ರಕಾರ ಆದಾಯ ರಹಿತ ಸಂಸ್ಥೆಗಳಾಗಿ ನೊಂದಾವಣೆಯಾಗಿವೆ. ಇವುಗಳ ಕೆಲಸ ಸಂಗ್ರಹಿಸಿದ ದೇಣಿಗೆಯನ್ನು ವಿವಿಧ ಕಂಪನಿಗಳಿಗೆ ಹಂಚುವುದಾಗಿದೆ. ಆದರೆ, ‘ಅಸೋಸಿಯೇಶನ್ ಫಾರ್ ಡೆಮೋಕ್ರಾಟಿಕ್ ರಿಫೋರ್ಮ್ಸ್’ ಎಂಬ ಸರ್ಕಾರೇತರ ಸಂಸ್ಥೆ ನೀಡಿರುವ ವರದಿ ಪ್ರಕಾರ, 2004-2012ರ ನಡುವೆ ರಾಜಕೀಯ ಪಕ್ಷಗಳಿಗೆ ಸಂದಾಯವಾದ ದೇಣಿಗೆಯಲ್ಲಿ ಶೇ.75% ಹಣಕ್ಕೆ ಯಾವುದೇ ಪುರಾವೆಗಳೇ ಇಲ್ಲ. ಕಾಯ್ದೆ ಪ್ರಕಾರ, ರೂ.20,000 ಕ್ಕಿಂತ ಹೆಚ್ಚು ನೀಡಿದವರ ಸವಿವರಗಳನ್ನು ಪಕ್ಷಗಳು ದಾನಿಗಳಿಂದ ಪಡೆದು ದಾಖಲಿಸಬೇಕು. ಆದರೆ, ಇದಾವುದೂ ಸರಿಯಾದ ರೀತಿಯಲ್ಲಿ ನಡೆಯುತ್ತಿಲ್ಲ. ಕಾಂಗ್ರೆಸ್, ಬಿಜೆಪಿ, ಎನ್ ಸಿ ಪಿ, ಸಿಪಿಎಮ್, ಸಿಪಿಐ ಮತ್ತು ಬಿಎಸ್ಪಿ ಗಳು 2004-05 ಮತ್ತು 2011-12ರ ಆರ್ಥಿಕ ಸಾಲಿನಲ್ಲಿ ರೂ.20,000ಕ್ಕಿಂತ ಮೇಲ್ಪಟ್ಟು ಯಾರೂ ದೇಣಿಗೆ ನೀಡಿಲ್ಲವೆಂಬ ನಂಬಲಾಗದ ಹೇಳಿಕೆ ನೀಡಿವೆ. ಇದೇ ಅವಧಿಯಲ್ಲಿ, ಬಿಜೆಪಿ 1334 ದಾನಿಗಳಿಂದ ಸುಮಾರು ರೂ.192 ಕೋಟಿ, ಕಾಂಗ್ರೆಸ್ 418 ದಾನಿಗಳಿಂದ ಸುಮಾರು ರೂ.172 ಕೋಟಿ ಸಂಗ್ರಹಿಸಿದೆ. ಸಿಪಿಐ ಅತಿ ಕಡಿಮೆ ರೂ.11 ಲಕ್ಷ ಪಡೆದುಕೊಂಡಿದೆ. ಇಲ್ಲಿ ಮುಖ್ಯವಾಗಿ ಸಮೂಹ ಸಂಸ್ಥೆಗಳು, ಕೈಗಾರಿಕಾ ಕ್ಷೇತ್ರ, ಗಣಿಗಾರಿಕೆ, ಆಮದು-ರಫ್ತು ಘಟಕ, ಪ್ರವಾಸೋದ್ಯಮ ಮತ್ತು ಶೈಕ್ಷಣಿಕ ಸಂಸ್ಥೆಗಳು ಕೊಡುಗೈ ದಾನಿಗಳಾಗಿದ್ದಾರೆ, ಇದಲ್ಲದೆ, ಸೆಸಾ ಗೋವಾ ಲಿ., ಸೊಲಾರೀಸ್ ಹೋಲ್ಡಿಂಗ್ಸ್ ಲಿ., ಸ್ಟೆರ್ಲೈಟ್ ಇಂಡಸ್ಟ್ರೀಸ್ ಇಂಡಿಯಾ ಲಿ., ಡೌ ಕೆಮಿಕಲ್ಸ್ ಲಿ., ಮೊದಲಾದ ವಿದೇಶಿ ಕಂಪನಿಗಳು ಧನ ಸಹಾಯ ಮಾಡುತ್ತಿವೆ. ಇನ್ನೂ ಹಲವು ಅಚ್ಚರಿಯ ಅಂಕಿ-ಅಂಶಗಳು, ಪಕ್ಷ ಮತ್ತು ಅಭ್ಯರ್ಥಿಗಳ ಪೂರ್ಣ ವಿವರ myneta.info ಎಂಬ ಜಾಲತಾಣದಲ್ಲಿ ಲಭ್ಯ.
ಭ್ರಷ್ಟಾಚಾರ ನಿರ್ಮೂಲನೆಯ ಪಣತೊಡುವ ರಾಜಕೀಯ ಪಕ್ಷಗಳು, ಜನರಿಗೆ ಮಂಕು ಬೂದಿ ಎರಚುವ ಪ್ರಯತ್ನ ಮಾಡುತ್ತಿವೆ. ಈಗಾಗಲೇ ಜಾರಿಯಲ್ಲಿರುವ ಮಾಹಿತಿ ಹಕ್ಕು ಕಾಯ್ದೆಯಡಿ ರಾಜಕೀಯ ಪಕ್ಷಗಳು ಬರುವುದಿಲ್ಲ. ಈ ನಿಟ್ಟಿನಲ್ಲಿ ಕೇಂದ್ರ ಮಾಹಿತಿ ಆಯೋಗದ (Central Information Commission) ಶ್ರಮವೂ ಫಲಪ್ರದವಾಗಲಿಲ್ಲ. ಚುನಾವಣಾ ಆಯೋಗಕ್ಕೆ ತಮ್ಮ ಸ್ವವಿವರಗಳ ಸಲ್ಲಿಕೆ ಮಾಡುತ್ತಿರುವಾಗ ಮತ್ತೊಂದರ (ಮಾಹಿತಿ ಹಕ್ಕು ಕಾಯ್ದೆ) ಅಗತ್ಯವಿಲ್ಲ ಎಂಬುವುದು ಪಕ್ಷಗಳ ವಾದ. ಹೀಗಾಗಿ ರಾಜಕೀಯ ದೇಣಿಗೆಯ ಮಾಹಿತಿ ಜನರಿಗೆ ಅಲಭ್ಯವಾಗಿದೆ. ಒಟ್ಟಾರೆ, ಕಪ್ಪು ಹಣದ ವ್ಯವಸ್ಥಿತ ವಿಲೇವಾರಿಗೆ ರಾಜಕೀಯ ಪಕ್ಷಗಳು ಮಾಧ್ಯಮವಾಗಿವೆ. ಇಷ್ಟೆಲ್ಲಾ ನಡೆಯುತ್ತಿದ್ದರೂ ಆದಾಯ ತೆರಿಗೆ ಇಲಾಖೆ ಅಥವಾ ಚುನಾವಣಾ ಆಯೋಗ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. 

(ಕೃಪೆ : ನಿಲುಮೆ )
Creative Commons License
Deevatige by Sandeep Phadke is licensed under a Creative Commons Attribution-NonCommercial 4.0 International License.
Based on a work at http://www.deevatige.blogspot.in/.

Comments

Popular posts from this blog

ಯುವ ಜನತೆ ಮತ್ತು ಸಾಮಾಜಿಕ ತಾಣಗಳು

        ಸಂ ಪರ್ಕ ಮಾಧ್ಯಮಗಳು ಒಂದೆರಡಲ್ಲ,ಹಲವು ಬಗೆಯವು.ಅನಾದಿಕಾಲದಿಂದಲೂ ಇಂತಹ ಮಾಧ್ಯಮಗಳು ಜಾರಿಯಲ್ಲಿವೆ. ಕಾಲ ಬದಲಾದಂತೆ ಶೀಘ್ರ ಸಂಪರ್ಕ ಕಲ್ಪಿಸಬಹುದಾದ ಸಾಧನಗಳು ಬರಲಾರಂಭಿಸಿದವು.ಇಂದಿನ ಈ-ಮೇಲ್,ಸಾಮಾಜಿಕ ತಾಣಗಳು (ಫೇಸ್ ಬುಕ್,ಟ್ವಿಟ್ಟರ್..) ಪ್ರಚಲಿತ ಸಾಧನಗಳು.ಆದರೆ ಸಾಂಪ್ರದಾಯಿಕ ಪತ್ರ ವ್ಯವಹಾರಕ್ಕೆ ಇದ್ದ ಗೈರತ್ತು ಈ ಮಾಧ್ಯಮಗಳಲ್ಲಿ ಕಾಣುವುದು ಕಷ್ಟ.ಆದರೆ ಹೊಸತನಕ್ಕೆ ಅಂಟಿಕೊಳ್ಳುವ ಅನಿವಾರ್ಯತೆ ಬೇರೆಯದೇ ಪ್ರಪಂಚಕ್ಕೆ ಕರೆದೊಯ್ಯುತ್ತವೆ.ಎಲ್ಲೋ-ಎಂದೋ ಭೇಟಿಯಾದವರು, ಯಾವುದೋ ಊರಿನಲ್ಲಿರುವವರು ಹೀಗೆ ಹತ್ತು ಹಲವು ಕಾರಣಗಳಿಂದ ದೂರವಾದವರನ್ನು ಹತ್ತಿರಕ್ಕೆ,ಸದಾ ಸಂಪರ್ಕದಲ್ಲಿರುವಂತೆ ಮಾಡುವ ಛಾತಿ ಸಾಮಾಜಿಕ ತಾಣಗಳಂತಹ ಅಂತರ್ಜಾಲ ಸಂಬಂಧಿ ವ್ಯವಸ್ಥೆಗಳಿಗಿವೆ.ವಯಸ್ಸಿನ ಅಂತರವಿಲ್ಲದೇ ಎಲ್ಲರನ್ನು ಆಕರ್ಷಿಸುವ ತಾಣಗಳು ಮನೆ-ಮನಗಳಲ್ಲಿ ಹಸುರಾಗಿವೆ.ಇವುಗಳ ಬಳಕೆ ಹೆಚ್ಚಾಗುತ್ತಲೇ ಇದೆ.ಒಂದು ಘಳಿಗೆಯೂ ಬಿಟ್ಟು ಇರಲಾರದಷ್ಟು ಪ್ರಭಾವ ಬೀರಿವೆ.ಭಾರತ ಫೇಸ್ ಬುಕ್ ಬಳಕೆಯಲ್ಲಿ ವಿಶ್ವದಲ್ಲೇ ಮೂರನೇ ಸ್ಥಾನದಲ್ಲಿದೆ.        ಯುವ ಜನಾಂಗ ಈ ತಾಣಗಳ ಅತಿ ಹೆಚ್ಚು ಬಳಕೆ ಮಾಡುತ್ತಿರುವುದು ಗೊತ್ತಿರುವ ವಿಚಾರವೆ.ಗೆಳೆಯರ ಬಳಗ ಕಟ್ಟಿಕೊಳ್ಳುವ ಆಸಕ್ತಿ ಹೆಚ್ಚಿಸುತ್ತಿರುವ ಸಾಮಾಜಿಕ ತಾಣಗಳು ಓದಿನ ಮೇಲಿರಬೇಕಾದ ಗಮನ ಕುಂಠಿತಗೊಳಿಸುತ್ತಿದೆ ಎಂಬ ಅಭಿಪ್ರಾಯಗಳು ಕೇಳಿಬರುತ್ತಿವೆ.ಇದರಲ್ಲಿ ಒಂದಷ್ಟು ಸತ್ಯವಿದೆ.ದಿನದ ಸುಮಾರು

ಮಾದಕ ಅಧ್ವಾನ

ಧೂ ಮಪಾನ, ಮದ್ಯಪಾನದಂತೆ ಮಾದಕ ದ್ರವ್ಯ ಸೇವನೆಯ ಚಟ ಹೊಸ ತಲೆಮಾರಿನ ಯುವಕ/ಯುವತಿಯರಲ್ಲಿ ವಿದೇಶಿ ಮೋಹದಂತೆ ಸದ್ದಿಲ್ಲದೆ ಹರಡುತ್ತಿದೆ. ಷೋಕಿಗಾಗಿ, ದೈಹಿಕ ಮತ್ತು ಮಾನಸಿಕ ನೋವಿನಿಂದ ಕೆಲ ಕ್ಷಣ ದೂರವಾಗಲು ಇದರ ಬಳಕೆಯಾಗುತ್ತಿದೆ. ಇದಕ್ಕೆ ದಾಸರಾಗುವವರಲ್ಲಿ ಹೆಚ್ಚಿನವರು 18 ರಿಂದ 30 ವರ್ಷದೊಳಗಿನವರು. ಜಗತ್ತಿನೆಲ್ಲೆಡೆ ಸುಮಾರು 500 ಬಿಲಿಯನ್ ಮೊತ್ತದ ಮಾದಕ ವಸ್ತುಗಳ ವಹಿವಾಟು ನಡೆಯುತ್ತದೆ. ಪೆಟ್ರೋಲಿಯಂ ಮತ್ತು ಶಸ್ತ್ರಾಸ್ತ್ರ ಉದ್ದಿಮೆಯ ನಂತರದ ಸ್ಥಾನ ದಕ್ಕಿದೆ! ಪ್ರತಿಷ್ಠೆ ಎಂದುಕೊಂಡಿರುವ ಯುವ ಜನಾಂಗದ ಮೊಂಡುತನ, ಸಾವಿನ ಬಾಗಿಲು ತಟ್ಟುವಂತೆಯೂ ಮಾಡಿದೆ. ದೇಶದಲ್ಲಿ ಸುಮಾರು ಒಂದು ಕೋಟಿ ಹೆರಾಯಿನ್ ವ್ಯಸನಿಗಳಿದ್ದಾರೆ. ಕೆಲ ತಿಂಗಳ ಹಿಂದೆ, ಮಂಗಳೂರಿನ ವಿದ್ಯಾರ್ಥಿನಿಯೋರ್ವಳು ಈ ದುಷ್ಚಟಕ್ಕೆ ಬಲಿಯಾದ ಘಟನೆ ನಮ್ಮ ಮುಂದಿದೆ. ನೆರೆಯ ಪಾಕಿಸ್ತಾನದಿಂದ ಇದರ ವ್ಯವಸ್ಥಿತ ಸರಬರಾಜು ನಡೆಯುತ್ತಿದೆ ಎಂಬ ಗುಮಾನಿಯೂ ಇದೆ. ಅದರಲ್ಲೂ ಕರಾವಳಿ ಪ್ರದೇಶ ವಾಮಮಾರ್ಗ ಕರುಣಿಸಿ ಡ್ರಗ್ ಮಾಫಿಯಾಕ್ಕೆ ತೆರೆದುಕೊಂಡಿದೆ. ಹಾಗಿದ್ದರೆ, ಡ್ರಗ್ಸ್ ಅಥವಾ ಮಾದಕ ವಸ್ತುಗಳ ಕುರಿತಾದ ಪಕ್ಷಿ ನೋಟ ಇಲ್ಲಿದೆ. ಮಾನಸಿಕ ಮತ್ತು ದೈಹಿಕ ಬದಲಾವಣೆಗೆ ಕಾರಣವಾಗುವ ವಸ್ತುಗಳಿಗೆ ಮಾದಕ ವಸ್ತು ಎನ್ನಲಾಗುತ್ತದೆ. ಇದು ಘನ, ದ್ರವ ಅಥವಾ ಅನಿಲ ರೂಪದಲ್ಲಿರುತ್ತದೆ. ವ್ಯಕ್ತಿಯ ನರಮಂಡಲದ ಮೇಲೆ ಪ್ರಭಾವ ಬೀರುವ ಮೂರು ಮುಖ್ಯ ಮಾದಕ ವಸ್ತುಗಳ ವಿಧಗಳು: ಡಿಪ

ಇಬ್ಬನಿ

ಮುಂಜಾವಿನ ತೆಕ್ಕೆಯೊಳು  ಹಸಿರುಟ್ಟ ಭೂರಮೆಯ  ಒಡಲಲ್ಲಿ  ಹನಿಯುತಿವೆ ಹನಿಗಳು  ಸಾಲು ಸಾಲಾಗಿ...  ಮರ-ಗಿಡಗಳ ಎಲೆಗಳ ಮೇಲೆ ದೃಶ್ಯವಾಗುತ್ತವೆ  ದಣಿದ-ಮಣಿದ ಮೈ-ಮನಕ್ಕೆ  ಜೀವ ತುಂಬುತ್ತವೆ ಪನ್ನೀರ ಪಸರುತ್ತಾ... ಅಲ್ಪಾಯುಷಿಯಾದರು  ದೀಪದ ಬುಡ್ಡಿಯಂತೆ ಉದಾರ ಗುಣ  ಚಳಿಯನ್ನೂ ಲೆಕ್ಕಿಸದೇ  ಅವಿರತ ದುಡಿಮೆ... ಬೆಳಕಿನ ಪರದೆ ಸರಿದಂತೆ  ಮತ್ತಷ್ಟು ಮೆರುಗು ಕ್ಷಣಮಾತ್ರದಲ್ಲಿ  ಜೀವದ ಹಂಗು ತೊರೆದು  ಮಂಗ ಮಾಯ... ತನ್ನ ಶಾಂತ ಚಿತ್ತ ಸೌಮ್ಯ ಸ್ವಭಾವ  ಮತ್ತೆ ಹುಟ್ಟಲು ಕಾರಣ ಇಬ್ಬನಿ ಇರಿಯುವುದಿಲ್ಲ ಇಹ-ಪರರ ... ದೀವಟಿಗೆ by Sandeep Phadke is licensed under a Creative Commons Attribution-NonCommercial-NoDerivs 2.5 India License .