Skip to main content

ತನು-ಮನ ದಣಿಯದ ಸೇವಕರು


            ‘ರೋಪಕಾರವೇ ಪರಮ ಧರ್ಮ’ ಎನ್ನುವವರು ತೀರಾ ವಿರಳ. ಆದರೆ ತಮ್ಮ ಜೀವನವನ್ನು ಸಮಾಜದ ಉನ್ನತಿಗಾಗಿ ಒಂದಲ್ಲ ಒಂದು ರೀತಿಯಲ್ಲಿ ತೊಡಗಿಸಿಕೊಂಡು, ಬದುಕನ್ನು ಸಾರ್ಥಕಗೊಳಿಸಿಕೊಂಡ ನಿಸ್ವಾರ್ಥಿಗಳು ನಮ್ಮ ನಡುವೆ ಇದ್ದಾರೆಂಬುದು ಹೆಮ್ಮೆಯ ವಿಷಯ. ಅಂತಹ ಕೆಲವರ ಪರಿಚಯ ಇಲ್ಲಿದೆ-

1.ಅಖಿಲ್ ಗೊಗೋಯ್
ಅಖಿಲ್ ಗೊಗೋಯ್
ಅಸ್ಸಾಂನ ಜೋರ್ಹಾಟ್ ಜಿಲ್ಲೆಯವರಾದ ಅಖಿಲ್ ಗೊಗೋಯ್ (ಜನನ:1976) ಆಂಗ್ಲ ಸಾಹಿತ್ಯದ ಪದವೀಧರರು. ದೇಶದ ಅತಿ ಸೂಕ್ಷ್ಮ ಈಶಾನ್ಯ ಭಾಗದಲ್ಲಿ ಭ್ರಷ್ಟಾಚಾರದ ವಿರುದ್ಧ ದನಿಯೆತ್ತಿದವರು. ಅಲ್ಲಿನ ಬುಡಕಟ್ಟು ಜನರ ಸಮಸ್ಯೆಗಳಿಗೆ ಮತ್ತು ಹಕ್ಕುಗಳಿಗೆ ಹೋರಾಡಿದರು. ಪ್ರಾರಂಭದಲ್ಲಿ ಯುನೈಟೆಡ್ ರೆವೆಲ್ಯೂಶನರಿ ಮೂಮೆಂಟ್ ಆಫ್ ಅಸ್ಸಾಂನ ಕಾರ್ಯಕರ್ತರಾಗಿ ಸೇರಿಕೊಂಡರು. ನಂತರ ಅಸ್ಸಾಂ ಕೃಷಿಕ್ ಮುಕ್ತಿ ಸಂಗ್ರಾಮ್ ಸಮಿತಿಯೆಂಬ ಸರ್ಕಾರೇತರ ಸಂಸ್ಥೆಯನ್ನು ಹುಟ್ಟು ಹಾಕಿದರು. ಇದರ ಮೂಲಕ 2009ರಲ್ಲಿ, ಜೀವ ವೈವಿಧ್ಯ ನಾಶವಾಗುತ್ತದೆಂಬ ಕಾರಣಕ್ಕೆ ಅಸ್ಸಾಂನಲ್ಲಿ ಜಲವಿದ್ಯುತ್ ಉತ್ಪಾದನೆಗಾಗಿ ನಿರ್ಮಾಣ ಹಂತದಲ್ಲಿದ್ದ ಅಣೆಕಟ್ಟುಗಳನ್ನು ತಡೆಯುವ ಪ್ರಯತ್ನ ಮಾಡಿದರು. ಮಾಹಿತಿ ಹಕ್ಕು ಕಾಯ್ದೆ ಕಾರ್ಯಕರ್ತರಾಗಿ ಅಸ್ಸಾಂನ ಹಲವು ಹಗರಣಗಳನ್ನು ಬಯಲಿಗೆಳೆದರು. ಇವುಗಳಲ್ಲಿ 1.25 ಕೋಟಿಯ ‘ಸಂಪೂರ್ಣ ಗ್ರಾಮ ರೋಜಗಾರ್ ಯೋಜನೆ’ ಮತ್ತು 60 ಲಕ್ಷದ ‘ಇಂದಿರಾ ಆವಾಸ್ ಯೋಜನೆ’ ಹಗರಣ ಪ್ರಮುಖವು. ಅಣ್ಣಾ ಹಜಾರೆಯವರ ಭ್ರಷ್ಟಾಚಾರ ವಿರೋಧಿ ಆಂದೋಲನದಲ್ಲಿ ಸಕ್ರಿಯರಾಗಿದ್ದರು. ಸರ್ಕಾರಿ ಯೋಜನೆಗಳಲ್ಲಿ ಪಾರದರ್ಶಕತೆಯನ್ನು ತರುವಲ್ಲಿನ ಇವರ ನಿರಂತರ ಹೋರಾಟಕ್ಕೆ 2008ರಲ್ಲಿ ಷಣ್ಮುಗಮ್ ಮಂಜುನಾಥ್ ಸಮಗ್ರ ಪ್ರಶಸ್ತಿ ಪ್ರಾಪ್ತವಾಗಿದೆ.


2. ಆನಂದ್ ಕುಮಾರ್
ಆನಂದ್ ಕುಮಾರ್
ಬಿಹಾರದ ಪಟ್ನಾ ಜಿಲ್ಲೆಯವರಾದ ಗಣಿತಜ್ಞ ಆನಂದ್ ಕುಮಾರ್ (ಜನನ:1973) ತಮ್ಮ ‘ಸೂಪರ್ 30’ ಕಾರ್ಯಕ್ರಮದಿಂದ ಅಂರತಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡರು. ಕಡು ಬಡತನದಲ್ಲಿ ಬಾಲ್ಯ ಕಳೆದ ಇವರು, ವಿದ್ಯಾರ್ಥಿ ದೆಸೆಯಲ್ಲಿ ಸಂಜೆಯ ಹೊತ್ತು ತಾಯಿಯ ಜೊತೆ ಹಪ್ಪಳ ಮಾರಿಕೊಂಡು ಬದುಕು ಸಾಗಿಸಿದ್ದರು. ಪ್ರತಿಷ್ಠಿತ ಕೇಂಬ್ರಿಜ್ ವಿಶ್ವ ವಿದ್ಯಾಲಯಕ್ಕೆ ಪ್ರವೇಶ ದೊರಕಿದ್ದರೂ, ತಮ್ಮ ತಂದೆಯ ಅಕಾಲಿಕ ಮರಣ, ಆರ್ಥಿಕ ಬಿಕ್ಕಟ್ಟು ಉನ್ನತ ಶಿಕ್ಷಣವನ್ನು ಮೊಟಕುಗೊಳಿಸಿತು. 1992ರಲ್ಲಿ ‘ರಾಮಾನುಜಂ ಸ್ಕೂಲ್ ಆಫ್ ಮ್ಯಾಥಮೆಟಿಕ್ಸ್’ ಎನ್ನವ ಖಾಸಗಿ ಶಿಕ್ಷಣ ಸಂಸ್ಥೆಯನ್ನು ಕಟ್ಟಿ ತಮ್ಮ ಜ್ಞಾನವನ್ನು ಧಾರೆಯೆರೆದರು. ನಂತರ 2002ರಲ್ಲಿ ಐಐಟಿ-ಜೆಇಇ ಪರೀಕ್ಷೆಗೆ ತರಬೇತಿ ಕೋರಿ ಬರುತ್ತಿದ್ದ ಬಡ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟು ‘ಸೂಪರ್ 30’ ಎಂಬ ಕಾರ್ಯಕ್ರಮ ರೂಪಿಸಿ, 30 ವಿದ್ಯಾರ್ಥಿಗಳಿಗೆ ಊಟ, ವಸತಿ ಉಚಿತ ಮತ್ತು ತರಬೇತಿ ಶುಲ್ಕದಲ್ಲೂ ವಿನಾಯಿತಿ ಕೊಟ್ಟರು. ಈವರೆಗೆ ಸುಮಾರು 300ರಲ್ಲಿ 263 ವಿದ್ಯಾರ್ಥಿಗಳು ಐಐಟಿ ಪ್ರವೇಶ ಪಡೆದಿದ್ದಾರೆ. ಉತ್ತಮ ಶಿಕ್ಷಣ ಪಡೆಯುವ ಹಂತದಲ್ಲಿ ಹಣಕಾಸಿನ ತೊಂದರೆ ಬರಬಾರದೆಂಬ ಇವರ ಕಳಕಳಿಗೆ ‘ಮೌಲಾನಾ ಅಬ್ದುಲ್ ಕಲಾಮ್ ಶಿಕ್ಷಾ ಪುರಸ್ಕಾರ್’, ‘ಪ್ರೊ.ಯಶವಂತರಾವ್ ಕೇಳ್ಕರ್ ಯುವ ಪುರಸ್ಕಾರ್’ ಗೌರವ ಪ್ರಶಸ್ತಿಗಳು ದಕ್ಕಿವೆ. ಚಿತ್ರ ನಿರ್ಮಾಪಕ ಅನುರಾಗ್ ಬಸು ಇವರ ಜೀವನ-ಸಾಧನೆಯನ್ನು ಕುರಿತು ಚಿತ್ರ ನಿರ್ಮಾಣಕ್ಕೆ ಸಿದ್ಧತೆ ನಡೆಸಿದ್ದಾರೆ.


3. ಬಾಬರ್ ಅಲಿ
ಬಾಬರ್ ಅಲಿ
ಪಶ್ಚಿಮ ಬಂಗಾಳದ ಮುರ್ಶಿದಾಬಾದ್ ಜಿಲ್ಲೆಯವನಾದ ಬಾಬರ್ ಅಲಿ (ಜನನ:1993) ತನ್ನ ಒಂಭತ್ತನೇ ವಯಸ್ಸಿನಲ್ಲಿ ಶಿಕ್ಷಣದಿಂದ ವಂಚಿತ ಮಕ್ಕಳಿಗೆ ಅಧ್ಯಾಪನ ಕೈಗೊಂಡವನು. ಪ್ರಾರಂಭದಲ್ಲಿ ತನ್ನ ಮನೆಯ ಹಿತ್ತಲಲ್ಲಿ ಆಟದಂತೆ ಮೊದಲ್ಗೊಂಡು ‘ಆನಂದ ಶಿಕ್ಷಾ ನಿಕೇತನ್’ ಎಂಬ ಶಾಲೆಯಾಗಿ ಪರಿವರ್ತಿತಗೊಂಡಿತು. ಮುರ್ಶಿದಾಬಾದ್ನ ಸುತ್ತ-ಮುತ್ತ ಸರ್ಕಾರಿ ಅಥವಾ ಖಾಸಗಿ ಶಾಲೆಗಳಿರಲಿಲ್ಲ. ಬಾಬರ್ ತಾನು ಶಾಲೆ ಮುಗಿಸಿ ಬಂದು ಸಂಜೆಯ ಹೊತ್ತು ಇತರರಿಗೆ ಕಲಿಸಲು ಶುರುವಿಟ್ಟ. 2002ರಲ್ಲಿ ಎಂಟು ವಿದ್ಯಾರ್ಥಿಗಳಿಂದ ಆರಂಭವಾಗಿ ಇದೀಗ 800ರಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಶಾಲೆಯಲ್ಲಿ ಅಭ್ಯಸಿಸುತ್ತಿದ್ದಾರೆ. ಒಟ್ಟು ಹತ್ತು ಅಧ್ಯಾಪಕರುಗಳಿದ್ದು ಹೆಚ್ಚಿನವರು ಇಲ್ಲಿಯ ಹಳೆ ವಿದ್ಯಾರ್ಥಿಗಳೇ. ಉಚಿತ ಶಿಕ್ಷಣ ಕಡು ಬಡವರ ಪಾಲಿಗೆ ವರವಾಗಿದೆ. ಇವನ ಈ ಶಿಕ್ಷಣ ಅಭಿಯಾನಕ್ಕೆ ಸಿಎನ್ಎನ್-ಐಬಿಎನ್ ವಾಹಿನಿಯು ‘ರಿಯಲ್ ಹೀರೋಸ್ ಅವಾರ್ಡ್’ ಪ್ರಶಸ್ತಿ ನೀಡಿ ಗೌರವಿಸಿದೆ. ಬಿಬಿಸಿಯು 2009ರಲ್ಲಿ ‘ವಿಶ್ವದ ಅತಿ ಕಿರಿಯ ಮುಖ್ಯೋಪಾಧ್ಯಾಯ’ ಎಂಬ ಸಾಕ್ಷ್ಯ ಚಿತ್ರ ಬಿತ್ತರಿಸಿತ್ತು.


4. ಕುಲಂದೈ ಫ್ರಾನ್ಸಿಸ್
ಕುಲಂದೈ ಫ್ರಾನ್ಸಿಸ್
ತಮಿಳುನಾಡಿನ ಸೇಲಂ ಜಿಲ್ಲೆಯವರಾದ ಫ್ರಾನ್ಸಿಸ್ರ (ಜನನ:1946) ತಂದೆ-ತಾಯಿ ಕೃಷಿ ಕಾರ್ಮಿಕರು. ಅವರ ಆರು ಜನ ಮಕ್ಕಳಲ್ಲಿ ಕಾಲೇಜು ಮೆಟ್ಟಿಲು ಹತ್ತಿದ್ದು ಫ್ರಾನ್ಸಿಸ್ ಮಾತ್ರ. ಬಾಲ್ಯದಲ್ಲಿ ಕಂಡ ಬಡತನ ಇವರನ್ನು ಬಿ.ಕಾಂ ಪದವಿಯ ನಂತರ ಐಷಾರಾಮಿ ಜೀವನದ ಕಡೆ ಮುಖ ಮಾಡುವಂತೆ ಮಾಡಲಿಲ್ಲ. ಬದಲಿಗೆ ಸರ್ಕಾರೇತರ ಸಂಸ್ಥೆಯೊಂದರಲ್ಲಿ ಸೇರಿಕೊಂಡರು. ಬಾಂಗ್ಲಾ ಯುದ್ಧದ(1971) ಸಮಯದಲ್ಲಿ ಸ್ವಯಂ ಸೇವಕರಾಗಿ ದುಡಿದರು. ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಗ್ರಾಮಸ್ಥರ ಅಸಹನೀಯ ಸ್ಥಿತಿ ಕಂಡು 1979ರಲ್ಲಿ ‘ಇಂಟಿಗ್ರೇಟೆಡ್ ವಿಲೇಜ್ ಡೆವಲಪಮೆಂಟ್ ಪ್ರಾಜೆಕ್ಟ್’ (ಐವಿಡಿಪಿ) ಎಂಬ ಸಂಸ್ಥೆಯನ್ನು ಪ್ರಾರಂಭಿಸಿದರು. ಮೊದಲ ಹಂತದಲ್ಲಿ ರಾತ್ರಿ ಶಾಲೆಗಳನ್ನು, ಪ್ರಥಮ ಚಿಕಿತ್ಸಾ ಕೇಂದ್ರಗಳನ್ನು ಆರಂಭಿಸಿದರು. ನಂತರ ಸಣ್ಣ ನೀರಾವರಿ ಕಾರ್ಯಕ್ರಮದಡಿ ಸುಮಾರು 331 ಕಿಂಡಿ ಅಣೆಕಟ್ಟುಗಳನ್ನು ಕಟ್ಟಿ, ಸುಮಾರು 40,000 ಜನ ಪ್ರಯೋಜನ ಪಡೆಯುವಂತೆ ಮಾಡಿದರು. 1989ರಲ್ಲಿ ಮಹಿಳೆಯರ ಸ್ವ-ಸಹಾಯ ಗುಂಪುಗಳನ್ನು ರಚಿಸುವಲ್ಲಿ ಸಕ್ರಿಯರಾದರು. 2011ರ ಹೊತ್ತಿಗೆ ಸುಮಾರು 8,200 ಗುಂಪುಗಳು, ಒಂದೂವರೆ ಲಕ್ಷ ಸದಸ್ಯರು ಮತ್ತು ಈ ಗುಂಪುಗಳ ನಿವ್ವಳ ಉಳಿತಾಯ 40 ಲಕ್ಷಕ್ಕೆ ಮುಟ್ಟಿತು. ದೇಶದ ಕುಗ್ರಾಮವೊಂದರ ಆರೋಗ್ಯ, ಸ್ವಾಸ್ಥ್ಯ ಸಂರಕ್ಷಣೆ, ಜೀವನೋಪಾಯ ಮತ್ತು ಮಕ್ಕಳ ಶಿಕ್ಷಣದ ಪ್ರಾಮುಖ್ಯತೆಯನ್ನು ಬೇರೂರುವಂತೆ ಮಾಡಿದ ಐವಿಡಿಪಿ ಮತ್ತು ಫ್ರಾನ್ಸಿಸ್ರವರ ಪರಿಶ್ರಮಕ್ಕೆ ರಾಮನ್ ಮ್ಯಾಗ್ಸಸ್ಸೆ ಪ್ರಶಸ್ತಿ (2012) ಲಭಿಸಿದೆ.


5. ಪಿ.ಕಲ್ಯಾಣಸುಂದರಂ

ಪಿ.ಕಲ್ಯಾಣಸುಂದರಂ

ತಮಿಳುನಾಡಿನ ತಿರುನೆಲವೆಲ್ಲಿ ಜಿಲ್ಲೆಯವರಾದ ಪಿ.ಕಲ್ಯಾಣಸುಂದರಂ (ಜನನ:1953) ಚಿನ್ನದ ಪದಕ ವಿಜೇತ ಗ್ರಂಥಪಾಲಕ. ತಮ್ಮ ವೃತ್ತಿ ಜೀವನವನ್ನು ಸಮಾಜ ಸೇವೆಗಾಗಿ ಮುಡುಪಾಗಿಟ್ಟರು. ಬಾಲ್ಯದಲ್ಲೇ ತಂದೆಯನ್ನು ಕಳಕೊಂಡರು. ಕೇಂದ್ರ ಸರ್ಕಾರದಿಂದ ‘ದೇಶದ ಅತ್ಯುತ್ತಮ ಗ್ರಂಥಪಾಲಕ’ ಎಂಬ ಶ್ಲಾಘನೆಗೆ ಒಳಗಾಗಿದ್ದಾರೆ. ಮೂವತ್ತೈದು ವರ್ಷಗಳ ಸೇವಾವಧಿಯ ಸಂಬಳ ಮತ್ತು ಪಿಂಚಣಿಯನ್ನು ದಾರಿದ್ರ್ಯ ಅನುಭಿಸುವವರ ಅಭಿವೃದ್ಧಿಗೆ ಕೊಡುಗೆಯಾಗಿ ಇತ್ತರು. ಇದಕ್ಕೆ ಮುಖವಾಣಿಯಾಗಿ ‘ಪಾಲಮ್’ ಎಂಬ ಸರ್ಕಾರೇತರ ಸಂಘಟನೆಯನ್ನು ಸ್ಥಾಪಿಸಿದರು. ಇದು ಕೊಡುಗೈ ದಾನಿಗಳ ಮತ್ತು ಸಹಾಯದ ಅಗತ್ಯವಿರುವ ಜನರ ಮಧ್ಯೆ ಸೇತುವಾಗಿ ಕಾರ್ಯ ನಿರ್ವಹಿಸುತ್ತಿದೆ. ಒರಿಸ್ಸಾ, ತಮಿಳುನಾಡು, ಆಂಧ್ರದಲ್ಲಿ ಚಂಡಮಾರುತವಾದಾಗ, ಮಹಾರಾಷ್ಟ್ರ, ಗುಜರಾತ್ನಲ್ಲಿ ಭೂಕಂಪವಾದಾಗ ಈ ಸಂಸ್ಥೆ ನೆರವು ನೀಡಿದೆ. ವಿಶ್ವದ ಅಗ್ರ ಹತ್ತು ಗ್ರಂಥಪಾಲಕರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿರುವ ಇವರು ಅಪ್ಪಟ ಗಾಂಧೀವಾದಿ. ಬಡ-ಬಗ್ಗರ ಸೇವೆಗೆ ತಮ್ಮ ತಾಯಿಯೇ ಸ್ಪೂರ್ತಿಯಂತೆ. ಅತ್ಯಾಧುನಿಕ ಗ್ರಂಥಾಲಯ ಮತ್ತು ಅಂತರಾಷ್ಟ್ರೀಯ ಮಕ್ಕಳ ವಿಶ್ವವಿದ್ಯಾನಿಲಯ ಕಟ್ಟುವ ಯೋಜನೆ ಇವರಲ್ಲಿದೆ. ತಮ್ಮ ದಿನಚರಿಯ ನಿರ್ವಹಣೆಗೂ ವೇತನದ ಹಣವನ್ನು ಉಪಯೋಗಿಸುತ್ತಿರಲಿಲ್ಲ ಎನ್ನುವುದು ಅಚ್ಚರಿಯ ಸಂಗತಿ.

             
Creative Commons License
ದೀವಟಿಗೆ by ಸಂದೀಪ ಫಡ್ಕೆ, ಮುಂಡಾಜೆ is licensed under a Creative Commons Attribution-NonCommercial-NoDerivs 2.5 India License

Comments

Popular posts from this blog

ಯುವ ಜನತೆ ಮತ್ತು ಸಾಮಾಜಿಕ ತಾಣಗಳು

        ಸಂ ಪರ್ಕ ಮಾಧ್ಯಮಗಳು ಒಂದೆರಡಲ್ಲ,ಹಲವು ಬಗೆಯವು.ಅನಾದಿಕಾಲದಿಂದಲೂ ಇಂತಹ ಮಾಧ್ಯಮಗಳು ಜಾರಿಯಲ್ಲಿವೆ. ಕಾಲ ಬದಲಾದಂತೆ ಶೀಘ್ರ ಸಂಪರ್ಕ ಕಲ್ಪಿಸಬಹುದಾದ ಸಾಧನಗಳು ಬರಲಾರಂಭಿಸಿದವು.ಇಂದಿನ ಈ-ಮೇಲ್,ಸಾಮಾಜಿಕ ತಾಣಗಳು (ಫೇಸ್ ಬುಕ್,ಟ್ವಿಟ್ಟರ್..) ಪ್ರಚಲಿತ ಸಾಧನಗಳು.ಆದರೆ ಸಾಂಪ್ರದಾಯಿಕ ಪತ್ರ ವ್ಯವಹಾರಕ್ಕೆ ಇದ್ದ ಗೈರತ್ತು ಈ ಮಾಧ್ಯಮಗಳಲ್ಲಿ ಕಾಣುವುದು ಕಷ್ಟ.ಆದರೆ ಹೊಸತನಕ್ಕೆ ಅಂಟಿಕೊಳ್ಳುವ ಅನಿವಾರ್ಯತೆ ಬೇರೆಯದೇ ಪ್ರಪಂಚಕ್ಕೆ ಕರೆದೊಯ್ಯುತ್ತವೆ.ಎಲ್ಲೋ-ಎಂದೋ ಭೇಟಿಯಾದವರು, ಯಾವುದೋ ಊರಿನಲ್ಲಿರುವವರು ಹೀಗೆ ಹತ್ತು ಹಲವು ಕಾರಣಗಳಿಂದ ದೂರವಾದವರನ್ನು ಹತ್ತಿರಕ್ಕೆ,ಸದಾ ಸಂಪರ್ಕದಲ್ಲಿರುವಂತೆ ಮಾಡುವ ಛಾತಿ ಸಾಮಾಜಿಕ ತಾಣಗಳಂತಹ ಅಂತರ್ಜಾಲ ಸಂಬಂಧಿ ವ್ಯವಸ್ಥೆಗಳಿಗಿವೆ.ವಯಸ್ಸಿನ ಅಂತರವಿಲ್ಲದೇ ಎಲ್ಲರನ್ನು ಆಕರ್ಷಿಸುವ ತಾಣಗಳು ಮನೆ-ಮನಗಳಲ್ಲಿ ಹಸುರಾಗಿವೆ.ಇವುಗಳ ಬಳಕೆ ಹೆಚ್ಚಾಗುತ್ತಲೇ ಇದೆ.ಒಂದು ಘಳಿಗೆಯೂ ಬಿಟ್ಟು ಇರಲಾರದಷ್ಟು ಪ್ರಭಾವ ಬೀರಿವೆ.ಭಾರತ ಫೇಸ್ ಬುಕ್ ಬಳಕೆಯಲ್ಲಿ ವಿಶ್ವದಲ್ಲೇ ಮೂರನೇ ಸ್ಥಾನದಲ್ಲಿದೆ.        ಯುವ ಜನಾಂಗ ಈ ತಾಣಗಳ ಅತಿ ಹೆಚ್ಚು ಬಳಕೆ ಮಾಡುತ್ತಿರುವುದು ಗೊತ್ತಿರುವ ವಿಚಾರವೆ.ಗೆಳೆಯರ ಬಳಗ ಕಟ್ಟಿಕೊಳ್ಳುವ ಆಸಕ್ತಿ ಹೆಚ್ಚಿಸುತ್ತಿರುವ ಸಾಮಾಜಿಕ ತಾಣಗಳು ಓದಿನ ಮೇಲಿರಬೇಕಾದ ಗಮನ ಕುಂಠಿತಗೊಳಿಸುತ್ತಿದೆ ಎಂಬ ಅಭಿಪ್ರಾಯಗಳು ಕೇಳಿಬರುತ್ತಿವೆ.ಇದರಲ್ಲಿ ಒಂದಷ್ಟು ಸತ್ಯವಿದೆ.ದಿನದ ಸುಮಾರು

ಮಾದಕ ಅಧ್ವಾನ

ಧೂ ಮಪಾನ, ಮದ್ಯಪಾನದಂತೆ ಮಾದಕ ದ್ರವ್ಯ ಸೇವನೆಯ ಚಟ ಹೊಸ ತಲೆಮಾರಿನ ಯುವಕ/ಯುವತಿಯರಲ್ಲಿ ವಿದೇಶಿ ಮೋಹದಂತೆ ಸದ್ದಿಲ್ಲದೆ ಹರಡುತ್ತಿದೆ. ಷೋಕಿಗಾಗಿ, ದೈಹಿಕ ಮತ್ತು ಮಾನಸಿಕ ನೋವಿನಿಂದ ಕೆಲ ಕ್ಷಣ ದೂರವಾಗಲು ಇದರ ಬಳಕೆಯಾಗುತ್ತಿದೆ. ಇದಕ್ಕೆ ದಾಸರಾಗುವವರಲ್ಲಿ ಹೆಚ್ಚಿನವರು 18 ರಿಂದ 30 ವರ್ಷದೊಳಗಿನವರು. ಜಗತ್ತಿನೆಲ್ಲೆಡೆ ಸುಮಾರು 500 ಬಿಲಿಯನ್ ಮೊತ್ತದ ಮಾದಕ ವಸ್ತುಗಳ ವಹಿವಾಟು ನಡೆಯುತ್ತದೆ. ಪೆಟ್ರೋಲಿಯಂ ಮತ್ತು ಶಸ್ತ್ರಾಸ್ತ್ರ ಉದ್ದಿಮೆಯ ನಂತರದ ಸ್ಥಾನ ದಕ್ಕಿದೆ! ಪ್ರತಿಷ್ಠೆ ಎಂದುಕೊಂಡಿರುವ ಯುವ ಜನಾಂಗದ ಮೊಂಡುತನ, ಸಾವಿನ ಬಾಗಿಲು ತಟ್ಟುವಂತೆಯೂ ಮಾಡಿದೆ. ದೇಶದಲ್ಲಿ ಸುಮಾರು ಒಂದು ಕೋಟಿ ಹೆರಾಯಿನ್ ವ್ಯಸನಿಗಳಿದ್ದಾರೆ. ಕೆಲ ತಿಂಗಳ ಹಿಂದೆ, ಮಂಗಳೂರಿನ ವಿದ್ಯಾರ್ಥಿನಿಯೋರ್ವಳು ಈ ದುಷ್ಚಟಕ್ಕೆ ಬಲಿಯಾದ ಘಟನೆ ನಮ್ಮ ಮುಂದಿದೆ. ನೆರೆಯ ಪಾಕಿಸ್ತಾನದಿಂದ ಇದರ ವ್ಯವಸ್ಥಿತ ಸರಬರಾಜು ನಡೆಯುತ್ತಿದೆ ಎಂಬ ಗುಮಾನಿಯೂ ಇದೆ. ಅದರಲ್ಲೂ ಕರಾವಳಿ ಪ್ರದೇಶ ವಾಮಮಾರ್ಗ ಕರುಣಿಸಿ ಡ್ರಗ್ ಮಾಫಿಯಾಕ್ಕೆ ತೆರೆದುಕೊಂಡಿದೆ. ಹಾಗಿದ್ದರೆ, ಡ್ರಗ್ಸ್ ಅಥವಾ ಮಾದಕ ವಸ್ತುಗಳ ಕುರಿತಾದ ಪಕ್ಷಿ ನೋಟ ಇಲ್ಲಿದೆ. ಮಾನಸಿಕ ಮತ್ತು ದೈಹಿಕ ಬದಲಾವಣೆಗೆ ಕಾರಣವಾಗುವ ವಸ್ತುಗಳಿಗೆ ಮಾದಕ ವಸ್ತು ಎನ್ನಲಾಗುತ್ತದೆ. ಇದು ಘನ, ದ್ರವ ಅಥವಾ ಅನಿಲ ರೂಪದಲ್ಲಿರುತ್ತದೆ. ವ್ಯಕ್ತಿಯ ನರಮಂಡಲದ ಮೇಲೆ ಪ್ರಭಾವ ಬೀರುವ ಮೂರು ಮುಖ್ಯ ಮಾದಕ ವಸ್ತುಗಳ ವಿಧಗಳು: ಡಿಪ

ಒಂದು ಸಾಲಿನ ಕತೆ

ಒಂದೇ ಸಾಲಿನಲ್ಲಿ ಉತ್ತರಿಸಲಾಗದು ಬದುಕೆಂಬ ಕ್ಲಿಷ್ಟ ಪ್ರಶ್ನೆ ಪತ್ರಿಕೆಗೆ. ಆಕಾಶಕ್ಕೆ ಏಣಿ ಇಟ್ಟಂತೆ, ಜೀವಮಾನವೇ ಜಾರಿ ಹೋಗುತ್ತದೆ. ದಿನ, ವಾರ, ತಿಂಗಳು ಕೊನೆಗೆ ಸಾಲು ಸಾಲಾಗಿ. ಪರಿವೆಯೇ ಇಲ್ಲದೆ ಕಳೆದುಹೋಗುತ್ತವೆ, ರಾತ್ರಿ ಬೆಳಗಾದಂತೆ ಸಾಲುಗಳು! ಈ ಸಾಲಿನಲ್ಲಿ ಆಗದ್ದು, ಮುಂದಿನ ಸಾಲಿನಲ್ಲಿ ಮಾಡುವ ಇರಾದೆ, ಪ್ರೌಢಿಮೆಯ ಭ್ರಮೆ ಮೈಮನವಿಡೀ ಹಬ್ಬುತ್ತದೆ, ಕಾಲಾಂತರ ಕಡೆಗಣಿಸಿ. ದಿನ ಎಣಿಸಿ, ಗುಣಿಸಿ, ಭಾಗಿಸುವಷ್ಟರಲ್ಲಿ ಆ ಸಾಲೂ ತುಳಿದಿರುತ್ತದೆ ನಿರ್ಗಮನದ ಹಾದಿ. ಮನಸ್ಸು ಮರುಗುತ್ತದೆ ಸಾಲು ಸಾಲುವುದಿಲ್ಲವೆಂದು. ಖಾಲಿ ಕೈಯಲ್ಲಿ ಬಂದು ಹೋಗುವ ನಮಗೂ, ಸಾಲುಗಳಿಗೂ ವ್ಯತ್ಯಾಸವಿಲ್ಲ. ಇಪ್ಪತ್ತೈದರ ಗುಣಾಕಾರದ ಹಬ್ಬಗಳಿಗೆ ಯಾವ ಸಾಲಿನ ಹಂಗಿಹುದೋ ಜಾಸ್ತಿ ? ಸಾಧನೆ, ಪ್ರತಿಷ್ಠೆಯ ಬೆಂಬತ್ತುವ ನಾವು ಸಾಲುಗಳ ಸಾಲಗಾರರಲ್ಲವೆ ? ನೋಡು-ನೋಡುತ್ತಿದ್ದಂತೆ ಮತ್ತೆ ಬಂದೆರಗುತ್ತದೆ, ಯಾವ ಭಕ್ಷೀಸನ್ನೂ ಬೇಡದೆ ಹೊಸ ಸಾಲು, ಹೊಸ ಸವಾಲು, ಹೊಸ ಅಹವಾಲು..!! (ಕೃಪೆ : ಕನ್ನಡ ಪ್ರಭ ) Deevatige by Sandeep Phadke is licensed under a Creative Commons Attribution-NonCommercial 4.0 International License . Based on a work at http://www.deevatige.blogspot.in/ .