ಸಾ ಧನೆಗೆ ವಯಸ್ಸಿನ ಅಂತರವಿಲ್ಲ.ಹಾಗೆಯೇ ಸಣ್ಣ ಪ್ರಾಯದಲ್ಲೇ ಅಸಾಧರಣ ಸಾಧನೆ ಮಾಡಿ ಬೆರಗು ಹುಟ್ಟಿಸಿದವರು ನಮ್ಮ ನಡುವೆಯಿದ್ದಾರೆ.ಇವರಲ್ಲಿ ಅಲ್ಪಾಯುಷಿಗಳೇ ಜಾಸ್ತಿ. ಅವರ ವಿಧಿಯೇ ಹಾಗಿರುತ್ತದೋ ಏನೋ.ಗಣಕ ತಜ್ಞ,ಸಂಘಟಕ ಅರೊನ್ ಸ್ವಾರ್ಟ್ಜ್ ಕೂಡ ಅಂತರ್ಜಾಲ ವ್ಯವಸ್ಥೆಯಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ಸಮರ್ಥವಾಗಿ ಹೋರಾಡಿ,ತನ್ನ 26ನೇ ವಯಸ್ಸಿನಲ್ಲಿ ಇಹಲೋಕದ ಬದುಕಿಗೆ ಪೂರ್ಣ ವಿರಾಮವಿಟ್ಟು ನೆನಪಾಗಿ ಉಳಿದು ಬಿಟ್ಟಿದ್ದಾನೆ. 1986 ನವಂಬರ್ 8ರಂದು ಜನಿಸಿಇದ ಸ್ವಾರ್ಟ್ಜ್ ತಂದೆ ರಾಬರ್ಟ್ ಸ್ವಾರ್ಟ್ಜ್ ಮತ್ತು ತಾಯಿ ಸುಸಾನ್.ಬಾಲ್ಯದಿಂದಲೇ ಅಂತರ್ಜಾಲ ಸಂಸ್ಕೃತಿಗೆ ಒಗ್ಗಿ ಹೋಗಿದ್ದ.ಹಾಗಾಗಿ ಅದರಲ್ಲೇ ತನ್ನ ಆಸಕ್ತಿಯನ್ನು ಬೆಳೆಸಿಕೊಂಡ.ತನ್ನ 13ನೇ ವಯಸ್ಸಿನಲ್ಲಿ ಶೈಕ್ಷಣಿಕವಾಗಿ ಉಪಯುಕ್ತ ಜಾಲತಾಣ ನಿರ್ಮಾಣದ ಸ್ಪರ್ಧೆಯಲ್ಲಿ ಬಹುಮಾನ ಗಿಟ್ಟಿಸಿಕೊಂಡ.ಈ ಮೂಲಕ ಮಸ್ಯಾಚುಸೆಟ್ ವಿವಿಯ ಗಣನೀಯ ಸಾಧನೆ ಮಾಡಿದ ವ್ಯಕ್ತಿಗಳ ಭೇಟಿ ಸಾಧ್ಯವಾಯಿತು.ಅಂತರ್ಜಾಲದ ಬಗ್ಗೆ ತನಗಿದ್ದ ತೃಷೆ ನೀಗಿಸಿಕೊಳ್ಳಲು ಅನುವಾಯಿತು.ಅಂತರ್ಜಾಲದಲ್ಲಿನ ಮಾಹಿತಿ ಎಲ್ಲರಿಗೂ ಮುಕ್ತವಾಗಿ ದೊರಕುವಂತಾಗಬೇಕೆಂಬ ದಿಟ್ಟ ನಿರ್ಧಾರದ ಜೊತೆ ಕಾರ್ಯೋನ್ಮುಖನಾದ.ಫಲವಾಗಿ 14ನೇ ವಯಸ್ಸಿನಲ್ಲೇ ಜಾಲತಾಣ ಮತ್ತು ಬ್ಲಾಗ್ ಗಳಲ್ಲಿನ ಹೊಸ ಬದಲಾವಣೆಗಳ ಮಾಹಿತಿಯನ್ನು ಪಡೆಯಲಿರುವ RSS feed(Rich Site Summary)ನ ತಂತ್ರಾಂಶ ನಿರ್ಮಾಣದಲ್ಲಿ ಕೈಜೋಡಿಸಿದ...