Skip to main content

ಬೇಡ ಸಲ್ಲದ ಪ್ರೇರೇಪಣೆ


ಸ್ವಾಮಿ ವಿವೇಕಾನಂದರು 1893ರ ಚಿಕಾಗೊ ವಿಶ್ವ ಧರ್ಮ ಸಮ್ಮೇಳನದಲ್ಲಿ ‘ಸಹೋದರಿಯರೇ, ಸಹೋದರರೇ’ ಎಂದು ಉದ್ಗರಿಸಿದ ಭಾಷಣ ಎಲ್ಲರನ್ನೂ ಚಕಿತಗೊಳಿಸಿತ್ತು. ಭಾರತೀಯರಲ್ಲಿ ಸಹೋದರತಾ ಭಾವಕ್ಕಿರುವ ತತ್ಪರತೆ ವಿಶ್ವಕ್ಕೇ ಪಾಠವಾಯಿತು. ಸ್ನೇಹ-ಸೌಹಾರ್ದತೆಯಿಂದ ‘ನಾವು ಭಾರತೀಯರು’ ಎಂದು ಎದೆ ಹಿಗ್ಗಿಸುವಂತೆ ಮಾಡಿತು. ಆದರೆ ಈ ಅಮೂರ್ತ ಘಳಿಗೆ ಇತಿಹಾಸದ ಪುಟ ಸೇರುತ್ತಿದ್ದಂತೆ ಹಾಸು-ಹೊಕ್ಕಾಗಿ ಬೆಳೆಯಬೇಕಿದ್ದ ಸಹೋದರತೆಯ ತತ್ವಗಳು ನೆನೆಗುದಿಗೆ ಬಿದ್ದವು. ಪ್ರಕೃತಿಯ ಎರಡು ಜಾತಿಗಳಾದ ಗಂಡು-ಹೆಣ್ಣುಗಳ ನಡುವೆ ಅಸಮಾನತೆ ಭುಗಿಲೆದ್ದಿತು. ಇದೀಗ ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣಿನ ಬದುಕುವ ಹಕ್ಕನ್ನೂ ಕಸಿದುಕೊಳ್ಳುವ ಮಟ್ಟಕ್ಕೆ ಬಂದು ನಿಂತಿದೆ. ‘ಮಾತೃ ದೇವೋ ಭವಃ’ ಎಂದು ಮೊದಲ ಸ್ಥಾನದಲ್ಲಿಟ್ಟು ಪೂಜಿಸುವ ಸಂಸ್ಕೃತಿಯ ನಡುವೆ ಅತ್ಯಾಚಾರ,ಕೊಲೆ,ವಂಚನೆ,ಭ್ರೂಣ ಹತ್ಯೆಯಂತಹ ಪ್ರಕರಣಗಳು ಸದ್ದಿಲ್ಲದೇ ನಡೆಯುತ್ತಲೇ ಇವೆ. ಸಮಾಜ ಘಾತುಕ ಶಕ್ತಿಗಳು ದೇಶದ ಪರಂಪರೆಯನ್ನು ಹಾಳುಗೆಡವುತ್ತಿವೆ. ಅತ್ಯಾಚಾರ, ಲೈಂಗಿಕ ಕಿರುಕುಳದಂತಹ ಹೇಯ ಕೃತ್ಯಗಳು ಹಳ್ಳಿಯಿಂದ ದಿಲ್ಲಿಯವರೆಗೆ ವಿಜೃಂಭಿಸುತ್ತಿವೆ. ದೇಶದ ರಾಜಧಾನಿಯಲ್ಲಿ ಇತ್ತೀಚೆಗೆ ಇಂತಹ ಪ್ರಕರಣವೊಂದು ಬೆಳಕಿಗೆ ಬಂದಿರುವುದು ಎಲ್ಲರೂ ಅರಾಜಕತೆಯ ಕಡೆ ಬೊಟ್ಟು ಮಾಡುವಂತೆ ಮಾಡಿದೆ. ಪ್ರತಿಭಟನೆಯ ಕಾವು ದಿನೇ ದಿನೇ ಏರುತ್ತಿದೆ.
          ನಮ್ಮಲ್ಲಿ ಹೆಣ್ಣನ್ನು ಧರ್ಮಾತೀತವಾಗಿ ಗೌರವದಿಂದ ಕಾಣುವ ರೀತಿ-ರಿವಾಜುಗಳಿದ್ದರೂ ಇವೆಲ್ಲವನ್ನು ಗಾಳಿಗೆ ತೂರಿ ಅನಿಯಂತ್ರಿತ ಅತ್ಯಾಚಾರ ಪ್ರಕರಣಗಳು ನಡೆಯುತ್ತಿವೆ. ಇದು ದೇಶದಲ್ಲಿ ಬೆಳೆಯುತ್ತಿರುವ ಅತಿ ದೊಡ್ಡ ಅಪರಾಧವೂ ಹೌದು. ಕಳೆದ ವರ್ಷ ಥಾಮಸ್ ರೀಟರ್ಸ್ ಪ್ರತಿಷ್ಠಾನ ನಡೆಸಿದ ವಿಶ್ವ ವ್ಯಾಪಿ ಸಮೀಕ್ಷೆಯ ಪ್ರಕಾರ ಭಾರತ ಮಹಿಳೆಯರ ರಕ್ಷಣೆಯ ವಿಚಾರದಲ್ಲಿ ನಾಲ್ಕನೆಯ ಅಪಾಯಕಾರಿ ರಾಷ್ಟ್ರವೆಂಬ ಕಟು ಸತ್ಯ ನುಂಗಲಾಗದ ತುತ್ತಾಗಿ ಪರಿಣಮಿಸಿದೆ. ದೇಶದ ಹಿತ ಕಾಪಾಡಲಿರುವ ಅಧಿ ನಾಯಕರು ಇತ್ತ ಕಡೆ ಗಮನ ಹರಿಸುತ್ತಿಲ್ಲವೇಕೆ? NCRB (ನ್ಯಾಷನಲ್ ಕ್ರೈಂ ರಿಪೋರ್ಟ್ಸ್ ಬ್ಯೂರೋ) 2009ರ ವರದಿಯನ್ವಯ ಸುಮಾರು 21,397 ಪ್ರಕರಣಗಳು ದಾಖಲಾಗಿವೆ. ಸೌಂತ್ ಇಂಡಿಯಾ ಸೆಲ್ ಫಾರ್ ಹ್ಯೂಮನ್ ರೈಟ್ಸ್ ನ ಅಧ್ಯಯನ ದೇಶದಲ್ಲಿ ನಿಮಿಷಕ್ಕೆ ಸರಾಸರಿ 34 ಅತ್ಯಾಚಾರಗಳು ನಡೆಯುತ್ತವೆ ಎಂಬ ದಂಗು ಬಡಿಸುವ ವಿವರಣೆ ನೀಡಿದೆ. ಇಂಟರ್ ನ್ಯಾಷನಲ್ ಮೆನ್ ಆಂಡ್ ಜೆಂಡರ್ ಇಕ್ವಾಲಿಟಿ ನಡೆಸಿದ ಸಮೀಕ್ಷೆ ಮೇರೆಗೆ ಭಾರತದ ನಾಲ್ಕರಲ್ಲಿ ಒಬ್ಬ ಪುರುಷ ಲೈಂಗಿಕ ದೌರ್ಜನ್ಯಯೆಸಗಿರುತ್ತಾನೆಂಬ ಅಂಶ ಬಯಲಿಗೆಳೆದಿದೆ. ಈ ಎಲ್ಲಾ ಅಂಕಿ-ಅಂಶಗಳು ದೇಶದಲ್ಲಿ ನಡೆಯುತ್ತಿರುವ ಅತಿ ಕ್ರೂರ ಅಪರಾಧದ ಎಳೆ-ಎಳೆಯನ್ನು ಬಿಡಿಸಿಡುತ್ತವೆ. ದೇಶ ವಿಭಜನೆಯ ಕಾಲದಲ್ಲಿ ಮಹಿಳೆಯರ ಅಪಹರಣ ಮತ್ತು ಅತ್ಯಾಚಾರ ವ್ಯಾಪಕವಾಗಿತ್ತು. ಒಟ್ಟಾರೆಯಾಗಿ ದಲಿತ ಮಹಿಳೆಯರು ಹೆಚ್ಚು ಅತ್ಯಾಚಾರಕ್ಕೆ ಒಳಗಾಗಿದ್ದಾರೆ. ಜಾತಿ ವ್ಯವಸ್ಥೆ ಇವರ ಅಳಲನ್ನು ನಗಣ್ಯ ಮಾಡಿದೆ. ಉಗ್ರವಾದಿ ಸಂಘಟನೆಗಳಾದ ಹಿಜ್-ಬುಲ್-ಮುಜಾಹಿದ್ದೀನ್, ಜಮಾಯತ್-ಅಲ್-ಮುಜಾಹಿದ್ದೀನ್ ಕಾಶ್ಮೀರಿ ಪಂಡಿತರು ಪಲಾಯನ ಮಾಡಲು ಅತ್ಯಾಚಾರವನ್ನೇ ಅಸ್ತ್ರವನ್ನಾಗಿಸಿದರು. ಭಾರತೀಯರು ತಲೆ ತಗ್ಗಿಸುವಂತೆ ಮಾಡಲು ಇನ್ನೆರಡು ಸಂಗತಿಗಳಿವೆ. ಮೊದಲನೆಯದು, 2006ರಲ್ಲಿ ರಾಜಸ್ಥಾನದಲ್ಲಿ ನಡೆದ ಜಪಾನ್ ಮಹಿಳೆ ಮೇಲಿನ ಅತ್ಯಾಚಾರ, 2008ರಲ್ಲಿ ಗೋವಾದಲ್ಲಿ ನಡೆದ 15ರ ಬ್ರಿಟಿಷ್ ಯುವತಿ ಸ್ಕಾರ್ಲೆಟ್ ಮೇಲೆ ಆದ ಅತ್ಯಾಚಾರ ಮತ್ತು ಹತ್ಯೆ ಪ್ರಕರಣ ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿತ್ತು. ಆಕೆಯ ತಾಯಿ ನ್ಯಾಯಕ್ಕಾಗಿ ಎಷ್ಟು ಗೋಗರೆದರೂ ಪ್ರಯೋಜನವಾಗಲಿಲ್ಲ. ಪ್ರವಾಸಿ ತಾಣವಾದ ಗೋವಾದ ಹೆಸರಿಗೆ ಚ್ಯುತಿ ಬರುತ್ತದೆಂದು ಪ್ರಕರಣವನ್ನು ಮುಚ್ಚಿಹಾಕಿದರು. ಎರಡನೆಯದು, ಜಮ್ಮು-ಕಾಶ್ಮೀರ ಸೇರಿದಂತೆ ಅಸ್ಸಾಂ, ಮಣಿಪುರದ ಗಡಿ ಪ್ರದೇಶದಲ್ಲಿ ಭಾರತೀಯ ಸೇನೆಯ ಯೋಧರೂ ಅತ್ಯಾಚಾರಗಳಲ್ಲಿ ಭಾಗಿಯಾಗಿದ್ದಾರೆಂಬ ಆರೋಪವಿದೆ. ಹೀಗೆ ನಾನಾ ದ್ವೇಷ-ವೈಷಮ್ಯ, ಮೋಜು, ಭಂಡತನಗಳಿಗೆ ಹೆಣ್ಣು ತುತ್ತಾಗುತ್ತಿರುವುದು ಆತ್ಮಾವಲೋಕನಕ್ಕೀಡು ಮಾಡಿದೆ.
          ನಾಲ್ಕು ವರ್ಷಗಳ ಹಿಂದೆ, ದೆಹಲಿಯಲ್ಲಿ ಪತ್ರಕರ್ತೆಯೊಬ್ಬಳು ಬೆಳಗ್ಗಿನ ಜಾವ 3:30ರ ಹೊತ್ತಿಗೆ ಸ್ವತಃ ಕಾರು ಚಲಾಯಿಸಿಕೊಂಡು ಮನೆಗೆ ತೆರಳುವ ವೇಳೆ ಹತ್ಯೆಗೀಡಾದಳು. ಘಟನೆಯ ಕುರಿತು ಪ್ರತಿಕೃಯಿಸಿದ ಮುಖ್ಯ ಮಂತ್ರಿ ಶೀಲಾ ದೀಕ್ಷಿತ್, ರಾತ್ರಿ ವೇಳೆ ಇಂತಹ ಸಾಹಸ ಮಾಡಿದ್ದೇ ತಪ್ಪು ಎಂದು ಬೇಜವಾಬ್ದಾರಿಯ ಹೇಳಿಕೆ ನೀಡಿ ನುಣುಚಿಕೊಂಡರು. ಮತ್ತೇ ಅಲ್ಲೇ ಅರೆ-ವೈದ್ಯಕೀಯ ವಿದ್ಯಾರ್ಥಿಯೋರ್ವಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ. ಪ್ರತಿಭಟನಾಕಾರರ ಮನವೊಲಿಸಲು ಪ್ರಯತ್ನಿಸಿದ ಸರ್ಕಾರ ಜನರ ಸಾಂಘಿಕ ಹೋರಾಟಕ್ಕೆ ಮಣಿದಿದೆ. ಅಧಿಕ ಸಂಖ್ಯೆಯ ಪೊಲೀಸ್ ಕಣ್ಗಾವಲಿರುವ ದೆಹಲಿಯಲ್ಲೇ ಈ ವರ್ಷ ಸರ್ಕಾರಿ ದಾಖಲೆಗಳ ಪ್ರಕಾರ ಸುಮಾರು 660 ಅತ್ಯಾಚಾರ ಪ್ರಕರಣಗಳು ಸಂಭವಿಸಿವೆ. ದೇಶದ ಪ್ರಥಮ ಪ್ರಜೆಯ ಚುಕ್ಕಾಣಿ ಮಹಿಳೆಯೊಬ್ಬರ ಕೈಯಲ್ಲಿದ್ದಾಗಲಾದರೂ ಈ ಪಿಡುಗನ್ನು ಹೋಗಲಾಡಿಸಲು ಸೂಕ್ತ ಕ್ರಮ ಕೈಗೊಳ್ಳಬಹುದಿತ್ತು. ಆದರೆ ಬೆಂಕಿ ಬಿದ್ದ ಮೇಲೆ ಬಾವಿ ತೋಡುವ ಪ್ರವೃತ್ತಿ ಮುಂದುವರಿದಿದೆ. ಅತ್ಯಾಚಾರಕ್ಕೆ ಗರಿಷ್ಠ ಹತ್ತು ವರ್ಷಗಳ ಜೈಲು ಶಿಕ್ಷೆಯಿದ್ದು, ಇದೀಗ ಕೇಂದ್ರ ಸರ್ಕಾರ ಮರಣ ದಂಡನೆ ಸೇರಿದಂತೆ ಕಾನೂನಿನಲ್ಲಿ ಬದಲಾವಣೆ ತರುವ ಅಭಿಪ್ರಾಯ ವ್ಯಕ್ತಪಡಿಸಿದೆ. ರಾಜಧಾನಿಯಲ್ಲಿ ಪ್ರಕರಣ ನಡೆದಿರುವುದರಿಂದ ರಾಷ್ಟ್ರಾದ್ಯಂತ ಸಂಚಲನ ಉಂಟು ಮಾಡಿದೆ. ಮಾಧ್ಯಮಗಳು ಬೆನ್ನಿಗೆ ಬಿದ್ದಿವೆ. ನ್ಯಾಯಕ್ಕಾಗಿ ಇನ್ನಿಲ್ಲದ ಹೋರಾಟ ನಡೆಯುತ್ತಿದೆ. ಆದರೆ ದೇಶದ ರಕ್ಷಣೆ ಮತ್ತು ಕಾನೂನುಗಳು ಶ್ರೀಮಂತ ಮತ್ತು ಪ್ರಭಾವಿ ವಲಯಕ್ಕೆ ಬೇಕಾದ ಹಾಗೆ ಇದೆ ಹೊರತು ಅನ್ಯಾಯವನ್ನು ಮೆಟ್ಟಿ ನಿಲ್ಲುವ ಸ್ಥಿತಿಯಲ್ಲಿಲ್ಲ. ಆದ್ದರಿಂದ ಅಮಾಯಕರು ಅತ್ಯಾಚಾರದ ವಿರುದ್ಧ ದನಿಯೆತ್ತಿದಾಗ, ಒತ್ತಡಕ್ಕೆ ಮಣಿದ ಪೊಲೀಸರು ಅನಪೇಕ್ಷಿತ, ದಿಕ್ಕು ದೆಸೆಯಿಲ್ಲದ ಅಥವಾ ಸ್ಲಂ ವಾಸಿ ವ್ಯಕ್ತಿಯನ್ನು ಥಳಿಸಿ ಆರೋಪ ಒಪ್ಪಿಕೊಳ್ಳುವಂತೆ ಮಾಡುವುದಿಲ್ಲವೆಂದು ಹೇಳಲಾಗದು.
          ಕ್ಷುಲ್ಲಕ ಕಾರಣಗಳಿಗೆ ದೌರ್ಜನ್ಯವೇ ಪರಿಹಾರವಲ್ಲ. ಹೆಣ್ಣಿನ ಜೊತೆ ಕ್ರೂರ ಮೃಗದಂತೆ ವರ್ತಿಸುವುದರಿಂದ ಅಥವಾ ಪೌರುಷ ತೋರಿಸುವುದರಿಂದ ಸಮಾಜದಲ್ಲಿ ಘನತೆ ಎತ್ತರಕ್ಕೇನೂ ಬೆಳೆಯುವುದಿಲ್ಲ. ಒಂದು ಜೀವದ ಅಸ್ತಿತ್ವವನ್ನು ಅನುಮಾನದಿಂದಲೇ ಪ್ರಶ್ನಿಸುವಂತೆ ಮಾಡುವ ಹಕ್ಕು ಯಾರಿಗೂ ನೀಡಿಲ್ಲ. ಲಿಂಗಾನುಪಾತದಲ್ಲಿ ಏರು-ಪೇರಾಗಿರುವುದು ಅಥವಾ ಶಿಕ್ಷಣದ ಕೊರತೆ ಮಹಿಳೆ ವಿರುದ್ಥ ಕಾನೂನು ಬಾಹಿರ ಚಟುವಟಿಕೆಗೆ ಕಾರಣವಲ್ಲ. ಸನ್ನಡತೆ ಮತ್ತು ಇಂದ್ರಿಯಗಳ ಮೇಲಿನ ಹತೋಟಿ ತುಂಬಾ ಮುಖ್ಯ. ಪ್ರಸ್ತುತ ದೆಹಲಿ ಪ್ರಕರಣದ ಕುರಿತಾಗಿ ರಾಷ್ಟ್ರೀಯ ಮಹಿಳಾ ಆಯೋಗದ ಮಮತಾ ಶರ್ಮ ಆರೋಪಿಗಳ ಪುರುಷತ್ವ ಹರಣ (Chemical Castration) ಮಾಡಬೇಕೆಂದು ಒತ್ತಾಯಿಸಿದ್ದಾರೆ. ಒಂದು ವೇಳೇ ಇದೇ ಶಿಕ್ಷೆಯೆಂದು ಅಂತಿಮವಾದರೆ ಪುರುಷ ಸಮಾಜಕ್ಕೊಂದು ಕಪ್ಪು ಚುಕ್ಕೆ. ವಿದೇಶಿ ವ್ಯಾಮೋಹದಿಂದಾಗಿ ಹೊಸ ಆಚಾರ, ಉಡುಪುಗಳು ಭಾರತದಲ್ಲಿ ಲಗ್ಗೆ ಇಟ್ಟಿವೆ. ಇದರಿಂದಾಗಿ ಕೆಲವು ಮೌಲಿಕ ಗುಣಗಳು ಮಾಯವಾಗಿವೆ. ಯುವತಿಯರ ‘ನಾವು ಯಾವ ಬಗೆಯ ಬಟ್ಟೆ ತೊಟ್ಟರೇನು? ನೋಡುಗರ ದೃಷ್ಟಿಕೋನ ಬದಲಾಗಬೇಕಿದೆ’ ಎಂಬ ವಾದ ಸಮಂಜಸವೆ ಇರಬಹುದು. ಆದರೆ ಕಾಮ, ಕ್ರೋಧ, ಲೋಭ ಮೊದಲಾದ ಅರಿಷಡ್ ವೈರಿಗಳ ನಿಗ್ರಹ ಕಷ್ಟ, ನಿಯಂತ್ರಿಸಬಹುದಷ್ಟೆ. ಸಮಾಜ ಅತ್ಯಾಚಾರದ ನಂತರ ಹೆಣ್ಣನ್ನು ಉಪಚರಿಸುವ ರೀತಿಯೇ ಬೇರೆಯದಾಗಿರುತ್ತದೆ. ಇದನ್ನೆಲ್ಲಾ ಮನಗಂಡು ಪ್ರಚೋದನಾತ್ಮಕವಾಗಿ ವ್ಯವಹರಿಸದೇ ಇದ್ದರೆ ಒಳಿತು. ಇನ್ನು ಟಿ,ವಿ., ಸಿನಿಮಾ ಮಾಧ್ಯಮಗಳಲ್ಲಿನ ಅಸಭ್ಯತೆ, ಅಂತರ್ಜಾಲದಲ್ಲಿ ಧಾರಾಳ ಸಿಗುವ ಅಶ್ಲೀಲ ಚಿತ್ರಗಳು, ಜಾಹೀರಾತುಗಳು ಕುಕೃತ್ಯಕ್ಕೆ ಎಡೆ ಮಾಡಿ ಕೊಡುತ್ತಿವೆ. ‘ಡಕಾಯಿತಿ ರಾಣಿ’ ಪೂಲನ್ ದೇವಿ, ವಿಶ್ವದ ಪ್ರಭಾವೀ ವ್ಯಕ್ತಿಗಳ ಸಾಲಿನಲ್ಲಿ ನಿಂತಿರುವ ಅಮೇರಿಕದ ಒಪ್ರಾಹ್ ವಿನ್ ಫ್ರೇ ಯ ತೆರೆಯ ಹಿಂದಿನ ಬದುಕಿನಲ್ಲಿ ಅತ್ಯಾಚಾರಕ್ಕೆ ಗುರಿಯಾಗಿದ್ದರೆಂಬ ನಂಬಲಾಗದ ಸಂಗತಿಗಳಿವೆ. ಅದೇನೇ ಇರಲಿ, ಹೆಣ್ಣು ಅಬಲೆಯಲ್ಲ, ಸಬಲೆಯೆಂಬ ರಣ ಕಹಳೆ ಮೊಳಗಬೇಕಿದೆ. ಭಾರತದಲ್ಲಿ ನಡುರಾತ್ರಿ ಮಹಿಳೆ ಸ್ವತಂತ್ರವಾಗಿ ಓಡಾಡುವಂತಾಗಬೇಕೆಂಬ ಗಾಂಧೀಜಿಯವರ ಆಶಯ ಹುಸಿಯಾಗಿದೆ. ಅವರೀಗ ಇರುತ್ತಿದ್ದರೆ ಎಷ್ಟು ನೊಂದುಕೊಳ್ಳುತ್ತಿದ್ದರೋ ಏನೋ ?
                                                                      

Creative Commons License
Deevatige by Sandeep Phadke is licensed under a Creative Commons Attribution-NonCommercial-NoDerivs 2.5 India Licens

Comments

Popular posts from this blog

ಯುವ ಜನತೆ ಮತ್ತು ಸಾಮಾಜಿಕ ತಾಣಗಳು

        ಸಂ ಪರ್ಕ ಮಾಧ್ಯಮಗಳು ಒಂದೆರಡಲ್ಲ,ಹಲವು ಬಗೆಯವು.ಅನಾದಿಕಾಲದಿಂದಲೂ ಇಂತಹ ಮಾಧ್ಯಮಗಳು ಜಾರಿಯಲ್ಲಿವೆ. ಕಾಲ ಬದಲಾದಂತೆ ಶೀಘ್ರ ಸಂಪರ್ಕ ಕಲ್ಪಿಸಬಹುದಾದ ಸಾಧನಗಳು ಬರಲಾರಂಭಿಸಿದವು.ಇಂದಿನ ಈ-ಮೇಲ್,ಸಾಮಾಜಿಕ ತಾಣಗಳು (ಫೇಸ್ ಬುಕ್,ಟ್ವಿಟ್ಟರ್..) ಪ್ರಚಲಿತ ಸಾಧನಗಳು.ಆದರೆ ಸಾಂಪ್ರದಾಯಿಕ ಪತ್ರ ವ್ಯವಹಾರಕ್ಕೆ ಇದ್ದ ಗೈರತ್ತು ಈ ಮಾಧ್ಯಮಗಳಲ್ಲಿ ಕಾಣುವುದು ಕಷ್ಟ.ಆದರೆ ಹೊಸತನಕ್ಕೆ ಅಂಟಿಕೊಳ್ಳುವ ಅನಿವಾರ್ಯತೆ ಬೇರೆಯದೇ ಪ್ರಪಂಚಕ್ಕೆ ಕರೆದೊಯ್ಯುತ್ತವೆ.ಎಲ್ಲೋ-ಎಂದೋ ಭೇಟಿಯಾದವರು, ಯಾವುದೋ ಊರಿನಲ್ಲಿರುವವರು ಹೀಗೆ ಹತ್ತು ಹಲವು ಕಾರಣಗಳಿಂದ ದೂರವಾದವರನ್ನು ಹತ್ತಿರಕ್ಕೆ,ಸದಾ ಸಂಪರ್ಕದಲ್ಲಿರುವಂತೆ ಮಾಡುವ ಛಾತಿ ಸಾಮಾಜಿಕ ತಾಣಗಳಂತಹ ಅಂತರ್ಜಾಲ ಸಂಬಂಧಿ ವ್ಯವಸ್ಥೆಗಳಿಗಿವೆ.ವಯಸ್ಸಿನ ಅಂತರವಿಲ್ಲದೇ ಎಲ್ಲರನ್ನು ಆಕರ್ಷಿಸುವ ತಾಣಗಳು ಮನೆ-ಮನಗಳಲ್ಲಿ ಹಸುರಾಗಿವೆ.ಇವುಗಳ ಬಳಕೆ ಹೆಚ್ಚಾಗುತ್ತಲೇ ಇದೆ.ಒಂದು ಘಳಿಗೆಯೂ ಬಿಟ್ಟು ಇರಲಾರದಷ್ಟು ಪ್ರಭಾವ ಬೀರಿವೆ.ಭಾರತ ಫೇಸ್ ಬುಕ್ ಬಳಕೆಯಲ್ಲಿ ವಿಶ್ವದಲ್ಲೇ ಮೂರನೇ ಸ್ಥಾನದಲ್ಲಿದೆ.        ಯುವ ಜನಾಂಗ ಈ ತಾಣಗಳ ಅತಿ ಹೆಚ್ಚು ಬಳಕೆ ಮಾಡುತ್ತಿರುವುದು ಗೊತ್ತಿರುವ ವಿಚಾರವೆ.ಗೆಳೆಯರ ಬಳಗ ಕಟ್ಟಿಕೊಳ್ಳುವ ಆಸಕ್ತಿ ಹೆಚ್ಚಿಸುತ್ತಿರುವ ಸಾಮಾಜಿಕ ತಾಣಗಳು ಓದಿನ ಮೇಲಿರಬೇಕಾದ ಗಮನ ಕುಂಠಿತಗೊಳಿಸುತ್ತಿದೆ ಎಂಬ ಅಭಿಪ್ರಾಯಗಳು ಕೇಳಿಬರುತ್ತಿವೆ.ಇದರಲ್ಲಿ ಒಂದಷ್ಟು ಸತ್ಯವಿದೆ.ದಿನದ ಸುಮಾರು

ಮಾದಕ ಅಧ್ವಾನ

ಧೂ ಮಪಾನ, ಮದ್ಯಪಾನದಂತೆ ಮಾದಕ ದ್ರವ್ಯ ಸೇವನೆಯ ಚಟ ಹೊಸ ತಲೆಮಾರಿನ ಯುವಕ/ಯುವತಿಯರಲ್ಲಿ ವಿದೇಶಿ ಮೋಹದಂತೆ ಸದ್ದಿಲ್ಲದೆ ಹರಡುತ್ತಿದೆ. ಷೋಕಿಗಾಗಿ, ದೈಹಿಕ ಮತ್ತು ಮಾನಸಿಕ ನೋವಿನಿಂದ ಕೆಲ ಕ್ಷಣ ದೂರವಾಗಲು ಇದರ ಬಳಕೆಯಾಗುತ್ತಿದೆ. ಇದಕ್ಕೆ ದಾಸರಾಗುವವರಲ್ಲಿ ಹೆಚ್ಚಿನವರು 18 ರಿಂದ 30 ವರ್ಷದೊಳಗಿನವರು. ಜಗತ್ತಿನೆಲ್ಲೆಡೆ ಸುಮಾರು 500 ಬಿಲಿಯನ್ ಮೊತ್ತದ ಮಾದಕ ವಸ್ತುಗಳ ವಹಿವಾಟು ನಡೆಯುತ್ತದೆ. ಪೆಟ್ರೋಲಿಯಂ ಮತ್ತು ಶಸ್ತ್ರಾಸ್ತ್ರ ಉದ್ದಿಮೆಯ ನಂತರದ ಸ್ಥಾನ ದಕ್ಕಿದೆ! ಪ್ರತಿಷ್ಠೆ ಎಂದುಕೊಂಡಿರುವ ಯುವ ಜನಾಂಗದ ಮೊಂಡುತನ, ಸಾವಿನ ಬಾಗಿಲು ತಟ್ಟುವಂತೆಯೂ ಮಾಡಿದೆ. ದೇಶದಲ್ಲಿ ಸುಮಾರು ಒಂದು ಕೋಟಿ ಹೆರಾಯಿನ್ ವ್ಯಸನಿಗಳಿದ್ದಾರೆ. ಕೆಲ ತಿಂಗಳ ಹಿಂದೆ, ಮಂಗಳೂರಿನ ವಿದ್ಯಾರ್ಥಿನಿಯೋರ್ವಳು ಈ ದುಷ್ಚಟಕ್ಕೆ ಬಲಿಯಾದ ಘಟನೆ ನಮ್ಮ ಮುಂದಿದೆ. ನೆರೆಯ ಪಾಕಿಸ್ತಾನದಿಂದ ಇದರ ವ್ಯವಸ್ಥಿತ ಸರಬರಾಜು ನಡೆಯುತ್ತಿದೆ ಎಂಬ ಗುಮಾನಿಯೂ ಇದೆ. ಅದರಲ್ಲೂ ಕರಾವಳಿ ಪ್ರದೇಶ ವಾಮಮಾರ್ಗ ಕರುಣಿಸಿ ಡ್ರಗ್ ಮಾಫಿಯಾಕ್ಕೆ ತೆರೆದುಕೊಂಡಿದೆ. ಹಾಗಿದ್ದರೆ, ಡ್ರಗ್ಸ್ ಅಥವಾ ಮಾದಕ ವಸ್ತುಗಳ ಕುರಿತಾದ ಪಕ್ಷಿ ನೋಟ ಇಲ್ಲಿದೆ. ಮಾನಸಿಕ ಮತ್ತು ದೈಹಿಕ ಬದಲಾವಣೆಗೆ ಕಾರಣವಾಗುವ ವಸ್ತುಗಳಿಗೆ ಮಾದಕ ವಸ್ತು ಎನ್ನಲಾಗುತ್ತದೆ. ಇದು ಘನ, ದ್ರವ ಅಥವಾ ಅನಿಲ ರೂಪದಲ್ಲಿರುತ್ತದೆ. ವ್ಯಕ್ತಿಯ ನರಮಂಡಲದ ಮೇಲೆ ಪ್ರಭಾವ ಬೀರುವ ಮೂರು ಮುಖ್ಯ ಮಾದಕ ವಸ್ತುಗಳ ವಿಧಗಳು: ಡಿಪ

ಒಂದು ಸಾಲಿನ ಕತೆ

ಒಂದೇ ಸಾಲಿನಲ್ಲಿ ಉತ್ತರಿಸಲಾಗದು ಬದುಕೆಂಬ ಕ್ಲಿಷ್ಟ ಪ್ರಶ್ನೆ ಪತ್ರಿಕೆಗೆ. ಆಕಾಶಕ್ಕೆ ಏಣಿ ಇಟ್ಟಂತೆ, ಜೀವಮಾನವೇ ಜಾರಿ ಹೋಗುತ್ತದೆ. ದಿನ, ವಾರ, ತಿಂಗಳು ಕೊನೆಗೆ ಸಾಲು ಸಾಲಾಗಿ. ಪರಿವೆಯೇ ಇಲ್ಲದೆ ಕಳೆದುಹೋಗುತ್ತವೆ, ರಾತ್ರಿ ಬೆಳಗಾದಂತೆ ಸಾಲುಗಳು! ಈ ಸಾಲಿನಲ್ಲಿ ಆಗದ್ದು, ಮುಂದಿನ ಸಾಲಿನಲ್ಲಿ ಮಾಡುವ ಇರಾದೆ, ಪ್ರೌಢಿಮೆಯ ಭ್ರಮೆ ಮೈಮನವಿಡೀ ಹಬ್ಬುತ್ತದೆ, ಕಾಲಾಂತರ ಕಡೆಗಣಿಸಿ. ದಿನ ಎಣಿಸಿ, ಗುಣಿಸಿ, ಭಾಗಿಸುವಷ್ಟರಲ್ಲಿ ಆ ಸಾಲೂ ತುಳಿದಿರುತ್ತದೆ ನಿರ್ಗಮನದ ಹಾದಿ. ಮನಸ್ಸು ಮರುಗುತ್ತದೆ ಸಾಲು ಸಾಲುವುದಿಲ್ಲವೆಂದು. ಖಾಲಿ ಕೈಯಲ್ಲಿ ಬಂದು ಹೋಗುವ ನಮಗೂ, ಸಾಲುಗಳಿಗೂ ವ್ಯತ್ಯಾಸವಿಲ್ಲ. ಇಪ್ಪತ್ತೈದರ ಗುಣಾಕಾರದ ಹಬ್ಬಗಳಿಗೆ ಯಾವ ಸಾಲಿನ ಹಂಗಿಹುದೋ ಜಾಸ್ತಿ ? ಸಾಧನೆ, ಪ್ರತಿಷ್ಠೆಯ ಬೆಂಬತ್ತುವ ನಾವು ಸಾಲುಗಳ ಸಾಲಗಾರರಲ್ಲವೆ ? ನೋಡು-ನೋಡುತ್ತಿದ್ದಂತೆ ಮತ್ತೆ ಬಂದೆರಗುತ್ತದೆ, ಯಾವ ಭಕ್ಷೀಸನ್ನೂ ಬೇಡದೆ ಹೊಸ ಸಾಲು, ಹೊಸ ಸವಾಲು, ಹೊಸ ಅಹವಾಲು..!! (ಕೃಪೆ : ಕನ್ನಡ ಪ್ರಭ ) Deevatige by Sandeep Phadke is licensed under a Creative Commons Attribution-NonCommercial 4.0 International License . Based on a work at http://www.deevatige.blogspot.in/ .