ಯಾ ಕೋ ಬೆಳಿಗ್ಗಿನಿಂದಲೇ ಮೈ-ಮನಸ್ಸು ಸರಿಯಿಲ್ಲ. ಸಾವಿನ ಮನೆಯ ಹಾಗೆ ಮೌನ ಆವರಿಸಿದೆ. ಇಷ್ಟು ದಿನ ಇಲ್ಲದ ಚಂಚಲತೆ ಇವತ್ತು ಗಿರಕಿ ಹೊಡೆಯುವಂತೆ ಮಾಡಿದೆ. ದೇಹಾಲಾಸ್ಯವೇನಿಲ್ಲ. ಏನೋ ಒಂದು ರೀತಿಯ ಭಯ, ಆತಂಕ ಹೇಳದೆ ಕೇಳದೆ ನೆಲೆ ನಿಂತಿದೆ. ವರ್ಷವಿಡೀ ಯೋಜನೆ ಹಾಕುವುದರಲ್ಲೇ ಕಳೆದು ಹೋಯಿತಲ್ಲವೆಂಬ ಪಾಪಪ್ರಜ್ಞೆ ಬೇರೆ ಕಾಡುತ್ತಿದೆ. ಕೊನೆಯ ದಿನದ ಅನುಭವ ಈ ತರಹವಾಗಬಹುದೆಂದು ಕನಸಿನಲ್ಲೂ ಅಂದುಕೊಂಡಿರಲಿಲ್ಲ. ಇಂದಿನ ಪತ್ರಿಕೆ ನಾಳಿನ ರದ್ದಿಯಾಗುವ ಹಾಗೆ ನನ್ನ ಜೊತೆಗಿರುವ ನೆನಪುಗಳು, ಸಂಬಂಧಗಳು, ವಸ್ತುಗಳು ನಾಳೆಗೆ ಹಳೆಯದಾಗಿ ಕಳಾಹೀನವಾದಂತೆ ಕಂಡರೆಂಬ ಕಳವಳ ಶುರುವಾಗಿದೆ. ಇಲ್ಲ, ಹಾಗಾಗಲು ಬಿಡಬಾರದು. ಇವೆಲ್ಲವನ್ನು ಮುಂದಿನ ವರ್ಷಕ್ಕೆ ಜೋಪಾನವಾಗಿ ಸಾಗಿಸಬೇಕು. ಹೊಸ ವರ್ಷಕ್ಕೆ ‘ಹೊಸತು’ ನನ್ನ ಹತ್ತಿರಕ್ಕೆ ಸುಳಿಯದಂತೆ ನಿಗಾವಹಿಸಬೇಕೆಂದು ಶಪಥ ಮಾಡಿದ್ದೇನೆ. ಇನ್ನೇನು ಕೆಲವೇ ಕ್ಷಣಗಳಲ್ಲಿ ಒಂದು ಸಾಲು ಇತಿಹಾಸದ ಪುಟ ಸೇರಲಿದೆ. ಕತ್ತಲು ಕವಿದಂತೆ ಬೀದಿ ದೀಪಗಳು ಮಂದವಾಗಿ ಬೆಳಕು ಚೆಲ್ಲುತ್ತಿವೆ. ರಸ್ತೆಯುದ್ದಕ್ಕೂ ಹೊಸ ವರ್ಷಾಚರಣೆಯ ಬಿರುಸು ಆರಂಭವಾಗಿದೆ. ಇಷ್ಟೊಂದು ಖುಷಿ ಪಡುವ ವಿಚಾರೇನಿದೆ? ಅರ್ಥವೇ ಆಗುತ್ತಿಲ್ಲ. ನಾನಂತೂ ನಾಲ್ಕು ಗೋಡೆಗಳ ಮಧ್ಯೆ ರಾತ್ರಿ ಕಳಿಯಬೇಕೆಂದು ನಿರ್ಧರಿಸಿ...