Skip to main content

ಉಸಿರುಗಟ್ಟಿಸುವ ಕರೆಗಳು..!


          ಮಾತಿನಲ್ಲೇ ಮೋಡಿ ಮಾಡುವುದು- ಒಂದು ಕಲೆ. ಇಲ್ಲಿ ಬೇಕು-ಬೇಡಗಳನ್ನು ಚನ್ನಾಗಿ ಅರಿತವರಂತೆ ಮನ ಮುಟ್ಟುವ ಹಾಗೆ ಮಾತನಾಡುವುದು ಮುಖ್ಯ. ವ್ಯವಹಾರ ಕುದುರಿಸಲು, ಪ್ರೇಮ ನಿವೇದನೆಯಲ್ಲಿ ಹೆಚ್ಚು ಬಳಕೆಯಾಗುತ್ತದೆಂದರೆ ಸಂಶಯವಿಲ್ಲ. ಈ ಮಾತುಗಳೆಲ್ಲಾ ತುಂಬಾ ನೇರಾ ನೇರ. ಆತ್ಮ ವಿಶ್ವಾಸ, ಸಹೃದಯತೆಯೇ ಇಲ್ಲಿ ಬುನಾದಿ. ಪರಸ್ಪರ ಭಾವ ಅಭಿವ್ಯಕ್ತಿಯಲ್ಲೇ ಎಲ್ಲವನ್ನೂ ತಾಳೆ ಹಾಕಬಹುದು. ಕಾಲ ಬದಲಾದಂತೆ ತಂತ್ರಜ್ಞಾನದ ಕೊಡುಗೆಯಾಗಿ ಬಂದಿರುವ ದೂರವಾಣಿ, ಮಿಂಚಂಚೆ ಮುಖತಃ ಭೇಟಿಯನ್ನೇ ರದ್ದು ಮಾಡಿವೆ. ಅದೇನೇ ಇರಲಿ, ಅಕ್ಕರೆಯ ಕರೆಗಳ ಜೊತೆ ನಮ್ಮ ಸಂವಹನ ಮುಂದುವರೆದರೆ ಭಾವನಾತ್ಮಕ ಬೆಸುಗೆಗೆ ಅಡ್ಡಿಯಿಲ್ಲ. ಎಲ್ಲೆಡೆಯಂತೆ ಇಲ್ಲೂ ತಂತ್ರಜ್ಞಾನದ ದುರುಪಯೋಗ ನಡೆಯುತ್ತಿದೆ. ಕೇವಲ ಸ್ವರದ ಮೂಲಕ ದೂರವಾಣಿ ಸಂಭಾಷಣೆಯಲ್ಲಿ ವ್ಯಕ್ತಿಯನ್ನು ಗುರುತಿಸುವ ನಮ್ಮ ‘ಮಾಪಕ’ ಮೋಸ ಹೋಗುವ ಸಾಧ್ಯತೆಗಳು ದಟ್ಟವಾಗಿವೆ. ಇದಕ್ಕೆ ಕಾರಣ ‘ಪ್ರಾಂಕ್ಸ್ಟರ್’ ಎಂದು ಕರೆಸಿಕೊಳ್ಳುವ ಪರಿಣತರು. ಹುಸಿ ಕರೆಗಳನ್ನು (Prank Call) ಮಾಡುವುದೇ ಇವರ ಕೆಲಸ. ಸುಳ್ಳನ್ನೇ ಬಂಡವಾಳವಾಗಿಸಿ ತಮ್ಮ ಗುರಿ ಸಾಧಿಸಿಕೊಂಡು, ನಗೆ ಹೋಗಿ ಹೊಗೆಯಾಡುವಂತೆ ಮಾಡುತ್ತಾರೆ. ನೀವು ಶಂಕರ್ ನಾಗ್ ಚಿತ್ರವೊಂದರಲ್ಲಿ ಗುಂಡೂ ರಾವ್, ತಮ್ಮ ಬೇಡಿಕೆಯ ಬೆಲೆಗೆ ಕುಂಬಳ ಕಾಯಿ ಸಿಗದೇ ಇದ್ದಾಗ, ‘ಕುಂಬಳ ಕಾಯಿಯಲ್ಲಿ ಬಾಂಬ್ ಉಂಟು’ ಎಂದು ಗುಲ್ಲೆಬ್ಬಿಸಿ ಇಡೀ ಮಾರುಕಟ್ಟೆಯೇ ಚಲ್ಲಾಪಿಲ್ಲಿಯಾಗಿ ಪೊಲಿಸರೂ ವಿಚಲಿತರಾಗುವ ಪ್ರಸಂಗ ನೋಡಿರಬಹುದು. ಇದೊಂದು ಚಿಕ್ಕ ಉದಾಹರಣೆಯಷ್ಟೆ. ಹುಸಿ ಕರೆ ಅಥವಾ ವದಂತಿಗಳ ‘ಪ್ರಾಬಲ್ಯ’ ವ್ಯಕ್ತಿಯ ಹಿನ್ನೆಲೆ ಅರಿತುಕೊಂಡು ಸಂದರ್ಭೋಚಿತವಾಗಿ ಪ್ರಶ್ನೆಗಳನ್ನು ಕೇಳಿ ಗುಟ್ಟು-ರಟ್ಟು ಮಾಡುವಲ್ಲಿಯವರೆಗೂ ಹಬ್ಬಿದೆ. ಇದಕ್ಕೆ ನಿದರ್ಶನವೆಂಬಂತೆ , ಬ್ರಿಟನ್ ರಾಣಿ ಎರಡನೆಯ ಎಲಿಜಬೆತ್ ಗೆ, ಕೆನೆಡಿಯನ್ DJ (ಡಿಸ್ಕ್ ಜಾಕಿ)ಯೊಬ್ಬ ತಾನು ಕೆನಡಾದ ಪ್ರಧಾನಿ ಜೀನ್ ಕ್ರೆಟನ್ ಎಂದು ಹೇಳಿ, ಸುಮಾರು 15 ನಿಮಿಷ ಮಾತನಾಡಿ ದೇಶದ ಸುವ್ಯವಸ್ಥೆ ಕಾಪಾಡಲು ಅವರಿಂದ ಸಹಾಯ ಹಸ್ತ ಪಡೆದಿದ್ದ. ಸಂಭಾಷಣೆ ಕೊನೆಗೊಳ್ಳುವವರೆಗೂ ರಾಣಿಗೆ ಹುಸಿ ಕರೆಯೆಂದು ಗೊತ್ತೇಯಾಗಲಿಲ್ಲ. ಇನ್ನೊಂದು ಸ್ವಾರಸ್ಯಕರ ಹುಸಿ ಕರೆಯನ್ನು ಮಿಯಾಮಿ ಮೂಲದ ರೇಡಿಯೋ ಕೇಂದ್ರವೊಂದು ಮಾಡಿತ್ತು. ವೆನೆಜುವೆಲಾ ಅಧ್ಯಕ್ಷ ಹುಗೋ ಚಾವೆಜ್ ಗೆ ಕ್ಯೂಬಾ ಅಧ್ಯಕ್ಷ ಫಿಡೆಲ್ ಕ್ಯಾಸ್ಟ್ರೋ ಎಂದೂ,  ಕ್ಯಾಸ್ಟ್ರೋ ಗೆ ತಾನು ಚಾವೆಜ್ ಎಂದು ಕರೆ ಮಾಡಿದ್ದು ನೇರ ಪ್ರಸಾರವಾಗಿತ್ತು. ಕ್ಯಾಸ್ಟ್ರೋ ಗೆ ಈ ವಿಷಯ ತಿಳಿದಾಗ ತಲ್ಲಣಗೊಂಡ. ಇಂತಹ ತಮಾಷೆಗಳು ದಾರಿಯಲ್ಲಿ ಹೋಗುವ ಮಾರಿಯನ್ನು ಮೈಮೇಲೆ ಎಳೆದುಕೊಂಡ ಅನುಭವ ತಂದಿಡುತ್ತವೆ.

          ಹುಸಿ ಕರೆಗಳನ್ನು ದಿನವಿಡೀ ಬಿತ್ತರಿಸುವ ಹಲವು ವೆಬ್ ತಾಣಗಳು ಚಾಲ್ತಿಯಲ್ಲಿವೆ. ಮಾಹಿತಿಯ ಪ್ರಕಾರ, 1995 ರಲ್ಲಿ ‘ಬ್ಲಾಕ್ ಔಟ್’ ಎನ್ನುವ ಮೊದಲ ಹುಸಿ ಕರೆಗಳ ರೇಡಿಯೋ ಜಾಲ ಹುಟ್ಟಿಕೊಂಡಿತು. ಇಂದಿಗೂ ಕಾರ್ಯ ನಿರ್ವಹಿಸುತ್ತಿದೆ. ಧ್ವನಿ ಮುದ್ರಿತ ಮತ್ತು ನೇರ ಪ್ರಸಾರಗಳು ನಡೆಯುತ್ತವೆ. ಇಂತಹ ಅನೇಕ ಸಮುದಾಯಗಳು, YouTubeನಲ್ಲಿ ಹಲವು ‘ಪ್ರಾತ್ಯಾಕ್ಷಿಕೆ’ಗಳು ಲಭ್ಯ. ಹುಸಿ ಕರೆಗಳು ಜನ ಸಾಮಾನ್ಯರ ನಡುವೆ ದಾಪುಗಾಲಿಡಲು F.M. ರೇಡಿಯೋ ಕೇಂದ್ರಗಳು ಸುಲಭ ವಾಹಿನಿಯಾಗಿ ಬಿಟ್ಟವು. ಬೇರೆಯವರನ್ನು ಅಣಕಿಸುವುದರಲ್ಲೇ ಆನಂದ ಹೊಂದುವ ಮನುಷ್ಯ ಸಹಜ ಗುಣ ಮಾರಕವಾಗಿ ಪರಿಣಮಿಸಲು ಹೆಚ್ಚು ಸಮಯವೇನೂ ಬೇಕಿಲ್ಲ. ಕೇಳುಗರಿಗೆ ಪುಕ್ಕಟೆ ಮನರಂಜನೆ ನೀಡುತ್ತಾ, ಮುಗ್ಧರ ಉಸಿರುಗಟ್ಟಿಸುವ ಕರೆಗಳು ಏನನ್ನು ಸಾಧಿಸಲು ಹೊರಟಿವೆ? ಉಡುಪಿಯ ಶಿರ್ವ ಮೂಲದ ಬ್ರಿಟನ್ ರಾಜಕುವರಿ ಕೇಟ್ ಳ ದಾದಿ ಜೆಸಿಂತಾ ಸಲ್ದಾನ, ಆಸ್ಟ್ರೇಲಿಯಾದ 2ಡೇ ಎಫ್.ಎಂ ನ RJ (ರೇಡಿಯೋ ಜಾಕಿ)ಗಳ ಕಪಿಚೇಷ್ಟೆಗೆ ಮನನೊಂದು ಆತ್ಮಹತ್ಯೆಗೆ ಶರಣಾದರು. ತಮಾಷೆಗಾಗಿಯೇ ನಡೆಸುವ ಸಂವಾದ ಖಾಸಗಿ ಜೀವನವನ್ನು ಬುಡಮೇಲು ಮಾಡುವಂತಿರಬಾರದು. ಸಾರ್ವಜನಿಕವಾಗಿ ಹಂಚಿಕೊಳ್ಳಬಾರದ ವಿಚಾರಗಳನ್ನು ಉಪಾಯವಾಗಿ ಹೊರಗೆಳೆಯುವುದು ಮಾನಸಿಕವಾಗಿ ಅತ್ಯಾಚಾರ ಮಾಡಿದಂತೆಯೇ. Public memories are short ಎನ್ನುವಂತೆ ಕೇಳುಗರು ನಕ್ಕು ಮರೆತು ಬಿಡುತ್ತಾರಾದರೂ, ಘಾಸಿಗೊಂಡ ಮನಸ್ಸಿನಲ್ಲಿ ಘಟನೆ ಶಾಶ್ವತವಾಗಿ ನೆಲೆಯೂರದೇ ಇರದು. ಇದೊಂದು ಮಾತಿನ, ಆಲೋಚನೆಯ ದಿಕ್ಕು ತಪ್ಪಿಸುವ ಸಕ್ರಿಯ ಕುಚೋದ್ಯ. ವ್ಯಕ್ತಿಯ ಮನೋಗತದ ಮೇಲೆ ಸವಾರಿ ಮಾಡುವ ಬಯಕೆ ಪ್ರಕಟಗೊಳ್ಳುತ್ತಿರುವುದು ವಿಪರ್ಯಾಸ.

          ಹುಸಿ ಕರೆಗಳ ಸಂಖ್ಯೆಯನ್ನು ಕಾಲರ್ ಐಡಿ (Called ID)ಯ ನೆರವಿನಿಂದ ಪತ್ತೆ ಹಚ್ಚಬಹುದು. ಆದರೆ ಅಂತರ್ಜಾಲದ ಮೂಲಕ ಕರೆ ಮಾಡುವ VoIP (Voice over Internet Protocal) ವಿಧಾನದಲ್ಲಿ ದೂರವಾಣಿ ಸಂಖ್ಯೆಯೆಂಬುವುದಿಲ್ಲ. ಆದ್ದರಿಂದ ಕರೆಯ ಜಾಡು ಹಿಡಿಯುವುದು ದುಬಾರಿ. ಹಾಸ್ಯ ಚಟಾಕಿಯಿಂದ ಹಿಡಿದು ತುರ್ತು ಪರಿಸ್ಥಿಯ ವಾತಾವರಣ ಸೃಷ್ಠಿಸುವವರೆಗೂ ಹುಸಿ ಕರೆಗಳ ಹರವು ವಿಸ್ತಾರವಾಗಿದೆ. ಆಸ್ಟ್ರೇಲಿಯಾದ ಪರ್ತ್ ನಗರ 2002ರ ಹೊಸ ವರ್ಷದ ಸಂಭ್ರಮಾಚರಣೆಯಲ್ಲಿದ್ದಾಗ, ಕುಡಿದ ಅಮಲಿನಲ್ಲದ್ದ ಯುವಕನೊಬ್ಬ ಭಯೋತ್ಪಾದನಾ ನಿಗ್ರಹ ದಳಕ್ಕೆ ಬಾಂಬ್ ಇಟ್ಟಿರುವುದಾಗಿ ಕರೆ ಮಾಡಿ ಸಿಕ್ಕಿ ಬಿದ್ದ. ಹೀಗೆ ಜನ ದಟ್ಟನೆಯ ಪ್ರದೇಶಗಳಾದ ಶಾಲೆ-ಕಾಲೇಜು-ಕಛೇರಿ ಆವರಣ, ಹಬ್ಬ-ಹರಿದಿನ, ಕ್ರೀಡಾಂಗಣಗಳಲ್ಲಿ ಬೆದರಿಕೆ ಹುಟ್ಟಿಸಿ ಜೀವವನ್ನು ಮುಷ್ಠಿಯಲ್ಲಿ ಹಿಟಿದು ಕಾಲಿಗೆ ಬುದ್ಧಿ ಹೇಳುವವರನ್ನು ನೋಡಿ ಮಜಾ ಪಡೆಯುವ ಚಾಳಿ ಅಂಕೆಯಿಲ್ಲದೆ ಮುಂದುವರೆದಿದ್ದು ಆಂತರಿಕ ರಕ್ಷಣೆಯನ್ನೇ ಅಲ್ಲೋಲ-ಕಲ್ಲೋಲ ಮಾಡಿದೆ. ಹೀಗಾಗಿ ಸತ್ಯ-ಮಿಥ್ಯಗಳ ನಡುವೆ ಗೊಂದಲ ಉಂಟಾಗಿದೆ. ಭಯೋತ್ಪಾದನೆ, ಅಕ್ರಮ ಕಳ್ಳ ಸಾಗಾಟ, ವಂಚನೆ ಮೊದಲಾದೆಡೆ ದುಷ್ಕರ್ಮಿಗಳಿಗೆ ಹುಸಿ ಕರೆ ವರದಾನವಾಗಿ ಪರಿಣಮಿಸಿದೆ. ಹಾಗಿದ್ದರೆ ಹುಸಿ ಕರೆಗಳಿಗೆ ತಿಲಾಂಜಲಿ ಇಡಲು ಸಾಧ್ಯವಿಲ್ಲವೇ? ಒಬ್ಬರ ಬಗೆಗಿನ ಕೂಲಂಕುಶ ತನಿಖೆಗೆ ಇದೊಂದೇ ಮಾರ್ಗವೇ? ಎಫ್.ಎಂ. ರೇಡಿಯೋಗಳು ಮನೋರಂಜನೆಯ ಹೆಸರಿನಲ್ಲಿ ಅಡ್ಡದಾರಿ ಹಿಡಿಯುತ್ತಿವೆಯೇ? ಈ ಎಲ್ಲ ಪ್ರಶ್ನೆಗಳಿಗೆ ಯಾವ ‘ಕರೆ’ ಉತ್ತರಿಸುವುದೋ ಗೊತ್ತಿಲ್ಲ. ಸಾರ್ವಜನಿಕ ಜೀವನಕ್ಕೆ ಭಂಗ ತರುವ ಹುಸಿ ಕರೆಗಳು ಶಿಕ್ಷಾರ್ಹ ಅಪರಾಧವೆನ್ನುವ ತಿಳುವಳಿಕೆ ಜನ ಮಾನಸದಲ್ಲಿ ಜಾಗೃತವಾಗಬೇಕಿದೆ.
ಕೃಪೆ : ಕನ್ನಡ  ಪ್ರಭ 
Creative Commons License
Deevatige by Sandeep Phadke is licensed under a Creative Commons Attribution-NonCommercial-NoDerivs 2.5 India License.

Comments

Popular posts from this blog

ಇಬ್ಬನಿ

ಮುಂಜಾವಿನ ತೆಕ್ಕೆಯೊಳು  ಹಸಿರುಟ್ಟ ಭೂರಮೆಯ  ಒಡಲಲ್ಲಿ  ಹನಿಯುತಿವೆ ಹನಿಗಳು  ಸಾಲು ಸಾಲಾಗಿ...  ಮರ-ಗಿಡಗಳ ಎಲೆಗಳ ಮೇಲೆ ದೃಶ್ಯವಾಗುತ್ತವೆ  ದಣಿದ-ಮಣಿದ ಮೈ-ಮನಕ್ಕೆ  ಜೀವ ತುಂಬುತ್ತವೆ ಪನ್ನೀರ ಪಸರುತ್ತಾ... ಅಲ್ಪಾಯುಷಿಯಾದರು  ದೀಪದ ಬುಡ್ಡಿಯಂತೆ ಉದಾರ ಗುಣ  ಚಳಿಯನ್ನೂ ಲೆಕ್ಕಿಸದೇ  ಅವಿರತ ದುಡಿಮೆ... ಬೆಳಕಿನ ಪರದೆ ಸರಿದಂತೆ  ಮತ್ತಷ್ಟು ಮೆರುಗು ಕ್ಷಣಮಾತ್ರದಲ್ಲಿ  ಜೀವದ ಹಂಗು ತೊರೆದು  ಮಂಗ ಮಾಯ... ತನ್ನ ಶಾಂತ ಚಿತ್ತ ಸೌಮ್ಯ ಸ್ವಭಾವ  ಮತ್ತೆ ಹುಟ್ಟಲು ಕಾರಣ ಇಬ್ಬನಿ ಇರಿಯುವುದಿಲ್ಲ ಇಹ-ಪರರ ... ದೀವಟಿಗೆ by Sandeep Phadke is licensed under a Creative Commons Attribution-NonCommercial-NoDerivs 2.5 India License .

ಯುವ ಜನತೆ ಮತ್ತು ಸಾಮಾಜಿಕ ತಾಣಗಳು

        ಸಂ ಪರ್ಕ ಮಾಧ್ಯಮಗಳು ಒಂದೆರಡಲ್ಲ,ಹಲವು ಬಗೆಯವು.ಅನಾದಿಕಾಲದಿಂದಲೂ ಇಂತಹ ಮಾಧ್ಯಮಗಳು ಜಾರಿಯಲ್ಲಿವೆ. ಕಾಲ ಬದಲಾದಂತೆ ಶೀಘ್ರ ಸಂಪರ್ಕ ಕಲ್ಪಿಸಬಹುದಾದ ಸಾಧನಗಳು ಬರಲಾರಂಭಿಸಿದವು.ಇಂದಿನ ಈ-ಮೇಲ್,ಸಾಮಾಜಿಕ ತಾಣಗಳು (ಫೇಸ್ ಬುಕ್,ಟ್ವಿಟ್ಟರ್..) ಪ್ರಚಲಿತ ಸಾಧನಗಳು.ಆದರೆ ಸಾಂಪ್ರದಾಯಿಕ ಪತ್ರ ವ್ಯವಹಾರಕ್ಕೆ ಇದ್ದ ಗೈರತ್ತು ಈ ಮಾಧ್ಯಮಗಳಲ್ಲಿ ಕಾಣುವುದು ಕಷ್ಟ.ಆದರೆ ಹೊಸತನಕ್ಕೆ ಅಂಟಿಕೊಳ್ಳುವ ಅನಿವಾರ್ಯತೆ ಬೇರೆಯದೇ ಪ್ರಪಂಚಕ್ಕೆ ಕರೆದೊಯ್ಯುತ್ತವೆ.ಎಲ್ಲೋ-ಎಂದೋ ಭೇಟಿಯಾದವರು, ಯಾವುದೋ ಊರಿನಲ್ಲಿರುವವರು ಹೀಗೆ ಹತ್ತು ಹಲವು ಕಾರಣಗಳಿಂದ ದೂರವಾದವರನ್ನು ಹತ್ತಿರಕ್ಕೆ,ಸದಾ ಸಂಪರ್ಕದಲ್ಲಿರುವಂತೆ ಮಾಡುವ ಛಾತಿ ಸಾಮಾಜಿಕ ತಾಣಗಳಂತಹ ಅಂತರ್ಜಾಲ ಸಂಬಂಧಿ ವ್ಯವಸ್ಥೆಗಳಿಗಿವೆ.ವಯಸ್ಸಿನ ಅಂತರವಿಲ್ಲದೇ ಎಲ್ಲರನ್ನು ಆಕರ್ಷಿಸುವ ತಾಣಗಳು ಮನೆ-ಮನಗಳಲ್ಲಿ ಹಸುರಾಗಿವೆ.ಇವುಗಳ ಬಳಕೆ ಹೆಚ್ಚಾಗುತ್ತಲೇ ಇದೆ.ಒಂದು ಘಳಿಗೆಯೂ ಬಿಟ್ಟು ಇರಲಾರದಷ್ಟು ಪ್ರಭಾವ ಬೀರಿವೆ.ಭಾರತ ಫೇಸ್ ಬುಕ್ ಬಳಕೆಯಲ್ಲಿ ವಿಶ್ವದಲ್ಲೇ ಮೂರನೇ ಸ್ಥಾನದಲ್ಲಿದೆ.        ಯುವ ಜನಾಂಗ ಈ ತಾಣಗಳ ಅತಿ ಹೆಚ್ಚು ಬಳಕೆ ಮಾಡುತ್ತಿರುವುದು ಗೊತ್ತಿರುವ ವಿಚಾರವೆ.ಗೆಳೆಯರ ಬಳಗ ಕಟ್ಟಿಕೊಳ್ಳುವ ಆಸಕ್ತಿ ಹೆಚ್ಚಿಸುತ್ತಿರುವ ಸಾಮಾಜಿಕ ತಾಣಗಳು ಓದಿನ ಮೇಲಿರಬೇಕಾದ ಗಮನ ಕುಂಠಿತಗೊಳಿಸುತ್ತಿದೆ ಎಂಬ ಅಭಿಪ್ರಾಯಗಳು ಕೇಳಿಬರು...

-: ಮುತ್ತಿನ ಹನಿಗಳು :-

------೧------ ಚುಂ- ಬನಕ್ಕೆ ಲಗ್ಗೆಯಿಡುವ ಯುವ ಜೋಡಿಗಳು ಅದೆಂತಹ ಪ್ರಕೃತಿ ಆರಾಧಕರು..! ------೨------ ಹೂದೋಟದಲ್ಲಿ ಕಾಣದ ಪತಂಗಗಳು ಯಥೇಚ್ಛ ಮಧು ಸವಿಯಲು ಯುವತಿಯರ ಹಿಂದೆ ಬಿದ್ದಿವೆಯಂತೆ..!