ಗಾಳಿ ಬೆಳಕುಗಳ ಜೊತೆ
ಒಡನಾಟದ ನಾಟಕ
ಇರುವ ಮನಸ್ಸಿಲ್ಲ ಇದ್ದಲ್ಲೇ
ಗತಿ ಕಾಣುವ ತನಕ
ಒಳಗೊಳಗೆ ಪುಟಿಯುತಿವೆ
ಅಂತರಾಳದ ಭಾವನೆಗಳು
ಬೇಡವೆನ್ನುವುದು ಹೇಗೆ..?
ಅವರಿವರು ನನ್ನವರಲ್ಲ
ಇರುವವರು ಹತ್ತಿರವಿಲ್ಲ
ಜೀವ ಸಾಗರದ ತೆರೆಗಳು
ಯಾವುದೋ ದಡ ಸೇರಿಸಿವೆ
ಮುಕ್ತಿ ಮಾರ್ಗವೆ ಹೀಗೇನು..?
ಎಲ್ಲ ಬಲ್ಲವರ ಬಳಿ ಹೋಗಲು
ಇನ್ನೆಷ್ಟು ಕ್ರಮಿಸಬೇಕು..?
ಪಯಣ ಒಂಟಿ ಅನಿಸುತ್ತಿಲ್ಲ
ಗತ ಸಾಲುಗಳ ಇಣುಕಿದಾಗ
ಆದರೆ ಯಾರೂ ಹುಡುಕಾಡಿದ
ಹಾಗಿಲ್ಲ ನನ್ನ ಅನಾಧ ಚಹರೆ
ಜೀವಿತಾವಧಿಯಲ್ಲೇ
ಎಳ್ಳು-ನೀರು ಬಿಟ್ಟಂತಿದೆ
ಇದ್ದೂ ಇಲ್ಲದಂತಾದೆಯೆ ನಾನು..?
Comments