ಅ ಧಿಕಾರದ ಚುಕ್ಕಾಣಿ ಹಿಡಿಯಲು, ರಾಜಕೀಯ ಪಕ್ಷಗಳಿಗೆ ಜನರ ಬೆಂಬಲ ಅವಶ್ಯಕ. ವಿವಿಧ ಆಶೋತ್ತರಗಳನ್ನು ಈಡೇರಿಸುವ ವಾಗ್ದಾನ ಮಾಡುವ ಇವರಿಗೆ, ಕಿಂಚಿತ್ತು ಸಹಾಯ ಮಾಡುವ ಅವಕಾಶ ನಮ್ಮ ಸಂವಿಧಾನ ಕೊಟ್ಟಿದೆ. ಪ್ರಜಾಪ್ರಭುತ್ವದ ದೃಷ್ಟಿಯಿಂದಲೂ, ನಾಗರಿಕರ ಹಕ್ಕು ಕೇವಲ ಮತದಾನಕಷ್ಟೇ ಸೀಮಿತವಾಗಬಾರದು. ಹಾಗಾಗಿ ಅರ್ಹ ವ್ಯಕ್ತಿ ಯಾ ಪಕ್ಷಕ್ಕೆ ದೇಣಿಗೆಯ ರೂಪದಲ್ಲಿ ಹಣದ ನೆರವನ್ನು ನೀಡಬಹುದು. ಆದರೆ, ಇತ್ತೀಚೆಗೆ ಸಂತ್ರಸ್ತರ ಪರಿಹಾರ ನಿಧಿಗೆ ಅಥವಾ ಸಮಾಜ ಸೇವೆಗೆ ಸಂದಾಯವಾಗುವ ಹಣಕ್ಕಿಂತ ಹೆಚ್ಚು ರಾಜಕೀಯ ಪಕ್ಷಗಳ ಪಾಲಾಗುತ್ತಿದೆ. ಸ್ವಾರ್ಥ ರಕ್ಷಣೆಗಾಗಿ, ಬೃಹತ್ ಉದ್ದಿಮೆದಾರರ ಕಪಿಮುಷ್ಠಿಯಲ್ಲಿ ಪಕ್ಷಗಳು ನಲುಗುತ್ತಿವೆ. ಇದರ ಇನ್ನೊಂದು ಮುಖವೆಂಬಂತೆ ಅಭ್ಯರ್ಥಿ ಯಾ ಪಕ್ಷಕ್ಕೆ ಹಣದ ಹೊಳೆ ಹರಿಯುತ್ತಿದೆ. ಸ್ವಾತಂತ್ರ್ಯ ಪೂರ್ವದಲ್ಲೂ, ಉದ್ಯಮರಂಗ ಚುನಾವಣೆಯ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿತ್ತು. ಸದಸ್ಯತ್ವ ಶುಲ್ಕ ಮತ್ತು ವೈಯುಕ್ತಿಕ ದೇಣಿಗೆಯಿಂದ ಚುನಾವಣೆಯ ವೆಚ್ಚ ಭರಿಸಲು ಪಕ್ಷಗಳಿಗೆ ಸಾಧ್ಯವಾಗದೇ ಇದ್ದುದ್ದು ಇದಕ್ಕೆ ಪ್ರಮುಖ ಕಾರಣ. ಕಾಲಕ್ರಮೇಣ ಚುನಾವಣೆಯ ಸಿದ್ಧತೆ ಮತ್ತು ಕಾರ್ಯಗತಗೊಳಿಸುವುದು ದುಬಾರಿಯಾಗುತ್ತಾ ಹೋಯಿತು. 2009ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಗೆ ಸರ್ಕಾರ ಸುಮಾರು 1120 ಕೋಟಿ ರೂಪಾಯಿ ವ್ಯಯಿಸಿದೆ. ಅಲ್ಲದೇ, ವಿವಿಧ ಅಭ್ಯರ್ಥಿ ಮತ್ತು ಪಕ್ಷಗಳು ಒಟ್ಟು ಸುಮಾರು 14 ಸಾವಿರ ಕೋಟಿ ಖರ್ಚು ಮಾಡಿರುವುದು ಅಂ...