ಇಂದು ಶಿಕ್ಷಣ ಕೇವಲ ಜ್ಞಾನದ ದಾಹ ತೀರಿಸಲಷ್ಟೇ ಸೀಮಿತವಾಗಿಲ್ಲ. ಬದಲಾಗಿ ಜೀವನ ನಿರೂಪಿಸುವಲ್ಲಿಯೂ ಪ್ರಮುಖ ಪಾತ್ರವಹಿಸುತ್ತಿದೆ. ದಿನೇ-ದಿನೇ ಎದುರಾಗುವ ಸವಾಲುಗಳನ್ನು ಸ್ವೀಕರಿಸಲು ವಿದ್ಯಾರ್ಥಿಗಳನ್ನು ಅಣಿಮಾಡುವ ವಿದ್ಯಾ ಸಂಸ್ಥೆಗಳು ನಮ್ಮಲ್ಲಿವೆ. ಸ್ಪರ್ಧಾ ಮನೋಭಾವವೊಂದಿದ್ದರೆ ಸಾಧನೆಗೆ ಅಡ್ಡಿಯಿಲ್ಲ. ಔದ್ಯೋಗಿಕ ಶಿಕ್ಷಣ ರಂಗ ಈ ನಿಟ್ಟಿನಲ್ಲಿ ಪ್ರಾಬಲ್ಯ ಮೆರೆದಿದೆ. ಐಟಿ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ನಮ್ಮ ದೇಶ, ರಾಜ್ಯದ ವಿದ್ಯಾರ್ಥಿಗಳಲ್ಲಿ ಇತ್ತ ಕಡೆ ಒಲವು ಮೂಡುವುದು ಸಹಜ. ಪದವಿ ಪೂರ್ವ ಅಥವಾ 12 ನೇ ತರಗತಿ ಮುಗಿಯುವುದನ್ನೇ ಕಾತರಿಸುತ್ತಾರೆ. ಪ್ರವೇಶ ಪರೀಕ್ಷೆಯೆಂಬ ಹುಚ್ಚು ಕುದುರೆಯನ್ನು ತಹಬಂದಿಗೆ ತರಲು ಕಸರತ್ತು ನಡೆಸುತ್ತಾರೆ. ನಾಯಿ ಕೊಡೆಗಳಂತೆ ಬೆಳೆಯುತ್ತಿರುವ ಇಂಜಿನೀರಿಂಗ್ ಕಾಲೇಜುಗಳ ಸಂಖ್ಯೆ, ಪ್ರಪ್ರತ್ಯೇಕ ಪ್ರವೇಶ ಪರೀಕ್ಷೆಗಳ ಗೋಜು ದಿಕ್ಕಾಪಾಲಾಗುವಂತೆ ಮಾಡುತ್ತಿವೆ. ಸೀಟು ಹಂಚಿಕೆಯ ವಿಷಯದಲ್ಲೂ ಖಾಸಗಿ ಕಾಲೇಜುಗಳದೇ ಸಿಂಹಪಾಲಾಗಿರುವುದರಿಂದ ಭಾರೀ ಶುಲ್ಕ ಕಟ್ಟುವಲ್ಲಿ ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ. ಈ ನಡುವೆ ಇಂಜಿನೀರಿಂಗ್ ನಂತಹ ವೃತ್ತಿಪರ ಪದವಿಗಳಿಸುವಾಸೆ ವಿವೇಚನೆಯಿಂದ ದೂರಕ್ಕೆ ಹೋದರೆ ಆಶ್ಚರ್ಯವಿಲ್ಲ. ಆದರೆ ಗಮನಿಸಲೇಬೇಕಾದ ಅಂಶವೆಂದರೆ, ಅನೇಕ ಕಾಲೇಜುಗಳು ಗುಣಮಟ್ಟ ಕಾಪಾಡುವಲ್ಲಿ ವಿಫಲವಾಗಿವೆ. ಇದರಿಂದ ಕಲಿಕಾ ಮಟ್ಟವೂ ಕುಂಠಿತಗೊಳ್ಳುತ್ತಿದೆ. ಇಂತಹ ಆಪಾದನೆ, ದೇಶದ ಪ್ರತಿಷ್ಠಿ...