ಡಿ ಜಿಟಲ್ ತಂತ್ರಜ್ಞಾನವನ್ನು ಬಗಲಲ್ಲಿಟ್ಟುಕೊಂಡು ಇಲೆಕ್ಟ್ರಾನಿಕ್ ಮಾಧ್ಯಮ ಮತ್ತು ಸಾಮಾಜಿಕ ತಾಣಗಳು ವಿಶ್ವವನ್ನೇ ಅಂಗೈಯಲ್ಲಿ ತಂದು ಕೂರಿಸಿವೆ. ಎಲ್ಲ ಕ್ಷೇತ್ರಗಳ ವಿದ್ಯಮಾನ ಮತ್ತು ದೈನಂದಿನ ಬದುಕಿನ ಪುಟ-ಪುಟಗಳು ಮುಕ್ತವಾಗಿ ಹರಡಲು ಅನುವು ಮಾಡಿಕೊಟ್ಟಿದೆ. ಇಷ್ಟೇ ಅಲ್ಲದೇ, ವಿವಿಧ ಸಂಘಟನೆಗಳ ಪ್ರತಿಭಟನೆಗಳಿಗೆ ಕುಮ್ಮಕ್ಕು ನೀಡಲೂ ಇವು ಹಿಂಜರಿಯುವುದಿಲ್ಲ. ವಾಕ್ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಎಲ್ಲರ ಗಮನ ಸೆಳೆಯುವಂತೆ ಮಾಡುವ ಉದಾರ ಗುಣ ಸೈಬರ್ ಕ್ರಾಂತಿಯ ಬೆನ್ನೆಲುಬು. ವಿವಾದಾತ್ಮಕ ಹೇಳಿಕೆಗಳ ಮೂಲಕ ತಮ್ಮ ಬೇಳೆ ಬೇಯಿಸಿಕೊಳ್ಳುವ ಮಂದಿಗೆ ಹೇಳಿ ಮಾಡಿಸಿದಂತಿರುವ ಈ ಸಾಮಾಜಿಕ ತಾಣಗಳು, ಜನರ ನಡುವೆ ಪ್ರಭಾವೀ ಮಾಧ್ಯಮವಾಗಿ ಬೆಳೆದು ನಿಂತಿದೆ. ಸಾಮಾಜಿಕ ಮತ್ತು ರಾಜಕೀಯ ಬದಲಾವಣೆ ತರುವಲ್ಲಿ ಇಂತಹ ಡಿಜಿಟಲ್ ಆಂದೋಲನಗಳು ಎಷ್ಟರ ಮಟ್ಟಿಗೆ ಸಹಕಾರಿಯಾಗುತ್ತಿದೆ ಎಂಬುದು ಯಕ್ಷ ಪ್ರಶ್ನೆ. ಆದರೆ ಜನರ ಮುಂದೆ ಹೊಸ ರೀತಿಯಲ್ಲಿ ಬೇಡಿಕೆ, ಅಹವಾಲುಗಳನ್ನು ಮುಂದಿಡಲು ಇದೊಂದು ಸೂಕ್ತ ವೇದಿಕೆಯಾಗಿ ಮಾರ್ಪಡುತ್ತಿದೆ. ಫೇಸ್ ಬುಕ್, ಟ್ವಿಟರ್ ಮೊದಲಾದೆಡೆ ಇದಕ್ಕಾಗಿಯೇ ನಾಯಿಕೊಡೆಯಂತೆ ಖಾತೆಗಳು ದೃಶ್ಯವಾಗುತ್ತವೆ. ಕಡಿಮೆ ವೆಚ್ಚದಲ್ಲಿ, ಎಲ್ಲಿ-ಯಾವಾಗ ಬೇಕಾದರೂ ಅಭಿಪ್ರಾಯ ಹಂಚಿಕೊಳ್ಳಬಹುದಾದರೂ, ಮೇಲ್ನೋಟಕ್ಕೆ ನಾಟಕೀಯವಾಗಿ ಕಾಣದೇ ಇರದು. ಹಿಂದಿನ ಪತ್ರ ವ್ಯವಹಾರದಲ್ಲಿದ್ದ ಕೌತುಕತೆ ಮಿಂಚಂಚೆ...