ಅಗ್ನಿ-ಸ್ಪರ್ಶ

ಅಗ್ನಿ-ಸ್ಪರ್ಶ

"ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ" *ಗೋಪಾಲಕೃಷ್ಣ ಅಡಿಗ------"ಅನ್ಯಾಯದ ಸ್ಥಾನವು ಅಭದ್ರವಾದುದು. ಅದರಿಂದ ಏಳಿಗೆ ಇಲ್ಲ". *ಸ್ವಾಮಿ ವಿವೇಕಾನಂದ------"ಇಂಗ್ಲೀಷ್ ಮುಖ್ಯ ಭಾಷೆ ಎನ್ನುವುದನ್ನು ಬಿಡುವ ತನಕ ಕನ್ನಡ ಬೆಳೆಯುವುದಿಲ್ಲ".* ಮಾಸ್ತಿ ವೆಂಕಟೇಶ ಅಯ್ಯಂಗಾರ್------"ಶಿಕ್ಷಣ ಕೇವಲ ಮಾಹಿತಿಗಳನ್ನು ತಲೆಗೆ ತುಂಬುವುದಲ್ಲ. ಜೀವನದಲ್ಲಿ ಸಾಮರಸ್ಯವನ್ನು ಕಲಿಸುವಂತಿರಬೇಕು". *ರವೀಂದ್ರನಾಥ ಟ್ಯಾಗೋರ್------ಒಂದೇ ಸೋಲನ್ನು ಅಂತಿಮ ಸೋಲು ಎಂದು ಭಾವಿಸಿ ನಿರಾಶರಾಗಬಾರದು.*ಎಫ್ ಸ್ಕಾಟ್ ಗೆರಾಲ್ಡ್------ನಾವು ಕಾಲವನ್ನು ಪಾಲಿಸಿದರೆ ಅದು ನಮಗೆ ವಿಧೇಯವಾಗಿರುತ್ತದೆ. *ಸರ್. ಎಂ. ವಿಶ್ವೇಶ್ವರಯ್ಯ------ಯುದ್ಧದಲ್ಲಿ ಗೆಲ್ಲಲು ಕೆಲವೊಮ್ಮೆ ಒಂದಕ್ಕಿಂತ ಹೆಚ್ಚು ಬಾರಿ ಹೋರಾಡಬೇಕಾಗುತ್ತದೆ. *ಮಾರ್ಗರೆಟ್ ಥ್ಯಾಚರ್------ಶಾಂತಿಯುತ ಜಗತ್ತಿನ ನಿರ್ಮಾಣ ನಮ್ಮ ಗುರಿಯಾಗಿರಬೇಕು. ಪರಸ್ಪರ ಗೌರವದಿಂದ ಕಾಣುವ ಪ್ರವೃತ್ತಿಯಲ್ಲೇ ಇದರ ಬೀಜ ಅಡಗಿದೆ. *ಜಾನ್ ಎಫ್. ಕೆನಡಿ------ಬಲವಾದ ನೂರು ಕೈಗಳಿಗಿಂತ ಚುರುಕಾದ ಒಂದು ಮೆದುಳು ಶ್ರೇಷ್ಠ. *ಎಡಿಸನ್------ಆಡದೆ ಮಾಡುವವನು ರೂಢಿಯೊಳಗುತ್ತಮನು.* ಸರ್ವಜ್ಞ------ಬಚ್ಚಿಟ್ಟುಕೊಂಡು ಬದುಕುವುದು ನನಗಿಷ್ಟವಿಲ್ಲ. ಹಾಗಂತ ಎಲ್ಲವನ್ನೂ ಬಿಟ್ಟು ಹರಾಜಿಗಿಡುತ್ತೇನೆಂದು ಇದರರ್ಥವಲ್ಲ.*ಜಿ. ಎಸ್. ಶಿವರುದ್ರಪ್ಪ------ಏಲ್ಲಾದರೂ ಇರು ಏಂತಾದರೂ ಇರು ಏಂದೆಂದಿಗೂ ನೀ ಕನ್ನಡವಾಗಿರು.*ಕುವೆಂಪು------ಧರ್ಮವೆಂದರೆ ಒಳ್ಳೆಯ ನಡತೆ; ಬರೇ ನಂಬಿಕೆಯಲ್ಲ.*ಡಾ. ರಾಧಾಕೃಷ್ಣನ್------ಪರರನ್ನು ಗೌರವಿಸುವುದನ್ನು ಕಲಿಯದಿದ್ದರೆ ನಾವೆಂದೂ ದೊಡ್ಡವರಾಗುವುದಿಲ್ಲ.*ವಲ್ಲಭ ಭಾಯಿ ಪಟೇಲ್------ನೀವು ಜನರನ್ನು ಅಂದಾಜಿಸುತ್ತಲ್ಲೇ ಇದ್ದರೆ ಅವರನ್ನು ಪ್ರೀತಿಸಲು ನಿಮಗೆ ಸಮಯವೇ ಇರುವುದಿಲ್ಲ.*ಮದರ್ ತೆರೆಸಾ------ಇಡೀ ಪ್ರಪ೦ಚದಲ್ಲಿ ಕೆಟ್ಟವರನ್ನು ಹುಡುಕುತ್ತಾ ಹೋದೆ. ಆದರೆ ನನ್ನಷ್ಟು ಕೆಟ್ಟವರು ಯಾರೂ ಸಿಗಲಿಲ್ಲ *ಸ೦ತ ಕಬೀರ-----ತಪ್ಪು ಹುಡುಕಬೇಡ; ಅದಕ್ಕೆ ಪರಿಹಾರ ಕಂಡುಹಿಡಿ.*ಹೆನ್ಸಿ ಫೋರ್ಡ್-----ಗಸಿಯ ಕಲಕದೆ ಕೂಳದ ಮೇಲ್ತಿಳಿಯ ಕುಡಿದು ನಡೆ |ಹಸನು ಹಗುರದ ಬಾಳು ||*ಡಿ. ವಿ. ಜಿ------ಒಂದು ತಾಸು ಓದಿದರೆ ಎರಡು ತಾಸು ದುಡಿಯಿರಿ, ಮೂರು ತಾಸು ವಿಚಾರ ಮಾಡಿ*ಪರಮಹಂಸ

ಸಮಾಜಕ್ಕೆ ಒಗ್ಗದ ತಾಣಗಳೇ..?


ಮಾಜದ ಹಿತದೃಷ್ಟಿಯಿಂದ ಜನಾಭಿಪ್ರಾಯ ಸಂಗ್ರಹಿಸುವುದು ಸಾಮಾನ್ಯ. ಪರ-ವಿರೋಧಗಳ ತುಲನೆ ಮಾಡಿ ಅಂತಿಮ ನಿರ್ಣಾಯ ಕೈಗೊಳ್ಳಲಾಗುತ್ತದೆ. ಇತ್ತೀಚೆಗೆ ಸಾಮಾಜಿಕ ತಾಣಗಳು ಅತಿರೇಕದ ಜನಾಭಿಪ್ರಾಯ ಒಟ್ಟುಗೂಡಿಸಲು ಮಾಧ್ಯಮಗಳಾಗುತ್ತಿವೆ. ವೈಯುಕ್ತಿಕ ದಿನಚರಿಯನ್ನೇ ‘ಗೋಡೆ’ ಬರಹವಾಗಿಸಿ ಸ್ನೇಹಿತರ ಪ್ರತಿಕ್ರಿಯೆಗೆ ದಿನವಿಡೀ ಹಪ-ಹಪಿಸುವವರಿದ್ದಾರೆ. ಕೆಲವು ಜಾತಿ-ಧರ್ಮ-ವ್ಯಕ್ತಿಗಳನ್ನು ಹಂಗಿಸುವ, ಛೇಡಿಸುವ ‘ಬೇನಾಮಿ’ಗಳ ಚಟುವಟಿಕೆ ಅಂಕೆಯಿಲ್ಲದ್ದಾಗಿದೆ. ಅವಹೇಳನ, ಪ್ರಚೋದನಕಾರಿ ಪ್ರತಿಕ್ರಿಯೆಗಳು ಭಾವೈಕ್ಯತೆಯನ್ನು ನುಂಗಿಹಾಕುತ್ತಿವೆ. ಇದೆಲ್ಲದರ ಬಗ್ಗೆ ಪ್ರಶ್ನೆ ಮಾಡಲೇಬೇಕೆನ್ನಿಸುವುದು ಸಹಜ.ಕಾಂಗ್ರೆಸ್ ನಾಯಕಿ ಸೋನಿಯಾ ವಿರುದ್ಧ ಫೇಸ್ ಬುಕ್ ನಲ್ಲಿದ್ದ ಮಾಹಿತಿ ಕೇಂದ್ರ ಸಚಿವ ಕಪಿಲ್ ಸಿಬಲ್ ರನ್ನು ಎಚ್ಚೆತ್ತುಕೊಳ್ಳುವಂತೆ ಮಾಡಿತು. ವಿಪಕ್ಷಗಳಿಂದ ಲೇವಡಿಗೊಳಗಾದರು. ಅದೇನೇ ಇರಲಿ, ಒಂದು ವಿಷಯ ಚರ್ಚೆಯಾಗಬೇಕಾದರೆ ಕಾರಣಗಳು ಬೇಕು ಎಂದು ಮನವರಿಕೆ ಮಾಡಿಕೊಳ್ಳುವುದು ಉತ್ತಮ. ಬಹುಶಃ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಪೂರ್ಣ ಪ್ರಮಾಣದಲ್ಲಿ ಉಪಯೋಗಿಸಿಕೊಂಡಿರುವ ಸಾಮಾಜಿಕ ತಾಣಗಳು ನಿರಂಕುಶ ಪ್ರಭುತ್ವ ಹೊಂದಿವೆ ಎಂದರೆ ತಪ್ಪಾಗಲಾರದು. ಆದರೆ ಇದೀಗ ವಿವಿಧ ಜಾತಿ-ಧರ್ಮ-ಪಂಗಡಗಳು ಇಲ್ಲಿ ನಡೆಯುವ ಧರ್ಮ ವಿರೋಧಕ್ಕೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ ಹಿನ್ನೆಲೆಯಲ್ಲಿ ನ್ಯಾಯಾಲಯವು ಆಕ್ಷೇಪಾರ್ಹ, ನಿಂದನಾತ್ಮಕ ಅಂಶಗಳನ್ನು ತೆಗೆದು ಹಾಕಲು ಫೆಬ್ರವರಿ ಐದರ ಗಡುವು ನೀಡಿದೆ.

ಪಾಶ್ಚಾತ್ಯ ದೇಶಗಳಂತೆ, ನಮ್ಮಲ್ಲೂ ಅಭಿವ್ಯಕ್ತಿ ಅಸ್ತ್ರವಾಗಿ ರೂಪ ತಳೆದಿರುವುದು ಸ್ತುತ್ಯವೇ. ಬೇಕು-ಬೇಡಗಳ ಕುರಿತು ಅಭಿಪ್ರಾಯ ಹಂಚಿಕೊಳ್ಳಲು ಸುಲಭೋಪಾಯ.ಗೆಳೆಯರ ಬಳಗ ಕಟ್ಟಿಕೊಳ್ಳುವುದಲ್ಲದೇ, ಸಾರ್ವಜನಿಕ ಹಿತಾಸಕ್ತಿಯ ವಿಚಾರಗಳನ್ನು ಚರ್ಚಿಸಲು, ಹೊಸ ಉತ್ಪನ್ನಗಳ ಜಾಹೀರಾತುಗಳಿಗೂ ಫೇಸ್ ಬುಕ್, ಟ್ವಿಟರ್, ಗೂಗಲ್+ ಮೊದಲಾದ ಸಾಮಾಜಿಕ ತಾಣಗಳನ್ನು ಬಳಸಲಾಗುತ್ತದೆ.ಹೀಗಿರುವಾಗ ಈ ತಾಣಗಳು ಕಳಂಕಿತವಾಗಲು ಸಾಧ್ಯವೇ? ಅಣ್ಣಾ ಹಜಾರೆಯವರ ಭ್ರಷ್ಟಾಚಾರ ವಿರೋಧಿ ಆಂದೋಲನದ ಸಂದರ್ಭದಲ್ಲಿ ಸಾಮಾಜಿಕ ತಾಣಗಳನ್ನು ಮುಖ್ಯ ವಾಹಿನಿಯಂತೆ ಬಳಸಿಕೊಳ್ಳಲಾಗಿದೆ. ಲಕ್ಷಾಂತರ ಜನರ ‘ಬೆಂಬಲ’ ಅಖಾಡಕ್ಕಿಳಿಯುವ ಮಂದಿಗೆ ನೈತಿಕ ಸ್ಧೈರ್ಯ ತುಂಬಿದೆ ಎನ್ನಬಹುದು. ಒಟ್ಟಾರೆಯಾಗಿ ಹಾಸು-ಹೊಕ್ಕಾಗಿ ಹರಡಿರುವ ಈ ತಾಣಗಳ ಶಕ್ತಿ ಪ್ರದರ್ಶನವಾದಂತಿತ್ತು.


ಆಹಾರ ಬೇರೆ, ವ್ಯವಹಾರ ಬೇರೆ. ಇಂತಹ ಸಾಮಾಜಿಕ ತಾಣಗಳು ಜನರ ಭಾವನೆಗಳನ್ನು ಸರಕಾಗಿಸಿ ವ್ಯವಹರಿಸುತ್ತಿವೆಯೇ ಹೊರತು ಮತ್ತೇನೂ ಅಲ್ಲ. ನಮ್ಮಲ್ಲಿ ನಿರ್ಣಯ ಕೈಗೊಳ್ಳುವ ಮತ್ತು ಜನಾಭಿಪ್ರಾಯ ಸಂಗ್ರಹಿಸುವಲ್ಲಿನ ಹುರುಪು ಕಾರ್ಯಗತಗೊಳಿಸುವಲ್ಲಿ ಇಲ್ಲ. ಹಾಗಾಗಿಯೇ ಈ ತಾಣಗಳನ್ನು ಬೇಕಾಬಿಟ್ಟಿಯಾಗಿ ಬಳಸಿಕೊಳ್ಳಲಾಗುತ್ತಿದೆ. ಕೇವಲ ಅವರಿವರು ಏನು ಹೇಳುತ್ತಾರೆಂದು ತಿಳಿಯುವುದರಿಂದ ಯಾವ ಪ್ರಯೋಜನವೂ ಇಲ್ಲ. ಫೇಸ್ ಬುಕ್, ಟ್ವಿಟರ್ ಗಳ ಚಟುವಟಿಕೆಗಳಲ್ಲಿ ಜವಾಬ್ದಾರಿಯುತವಾಗಿ ವರ್ತಿಸದೇ ಇರುವುದು, ವಾದಕ್ಕೆ ಪ್ರತಿವಾದವೆಂಬ ಧೋರಣೆ ಮತ್ತು ತಮ್ಮನ್ನೇ ತಾವು promote ಮಾಡಿಕೊಳ್ಳುವ ಚಾಳಿ ಕೆಲ ಸಂದರ್ಭದಲ್ಲಿ ಮಿತಿಮೀರಿದಾಗ ಪ್ರತಿಕೂಲ ವಾತಾವರಣ ಏರ್ಪಡುವಂತೆ ಮಾಡುತ್ತದೆ.ಎಲ್ಲರಿಗೂ ಮುಕ್ತವಾಗಿರುವ ಈ ತಾಣಗಳಲ್ಲಿ ಸಂಕೀರ್ಣ ವಿಚಾರಗಳನ್ನು ಚರ್ಚಿಸುವಾಗ ಗಾಳಿಯಲ್ಲಿ ಗುಂಡು ಹಾರಿಸಿದಂತೆ ಅಭಿಪ್ರಾಯ ನೀಡುವುದರಲ್ಲಿ ಅರ್ಥವಿಲ್ಲ. ಅನ್ಯ ಮನಸ್ಕರಾಗಿ ಆಕ್ರೋಶಪಡುವುದು, ಸಾಂದರ್ಭಿಕ ನೆಲೆಯಲ್ಲಿ ಕೆಂಗಣ್ಣಿಗೆ ಗುರಿಯಾಗಬಹುದು. ಇಷ್ಟಕ್ಕೂ ಇಲ್ಲಿ ನಡೆಯುವ ಚರ್ಚೆಗಳ ವಿಷಯ ವ್ಯಾಪ್ತಿ ಕಿರಿದು.ತ್ವರಿತ ಸಂಪರ್ಕ, ವಿಚಾರ-ವಿಮರ್ಶೆ ಮತ್ತು ಅನಿಸಿಕೆಗಳಿಗೆ ವೇದಿಕೆಯಾಗಿರುವ ತಾಣಗಳಲ್ಲಿ ಪೂರ್ವಾಗ್ರಹ ಪೀಡಿತರಂತೆ ನಡೆದುಕೊಳ್ಳದೇ ಇದ್ದರೆ ಕಲಹಕ್ಕೆ ಆಸ್ಪದವೇ ಇರುವುದಿಲ್ಲ. ಅಭಿವ್ಯಕ್ತಿಯ ಹೆಸರಿನಲ್ಲಿ ಜನರಿಗೆ ಅವಕಾಶ ಕಲ್ಪಿಸಲಾಗಿದೆಯೇ ಹೊರತು, ಇದು ಊರಿನ ಪಂಚಾಯಿತಿ ಕಟ್ಟೆಯಾಗಲು ಅಥವಾ ದೇಶವನ್ನು ಪಲ್ಲಟಿಸುವ ಸೂತ್ರವಾಗಲು ಅಸಾಧ್ಯ.

          ಸಾಮಾಜಿಕ ತಾಣಗಳ ಕುರಿತು ಒಂದಷ್ಟು ಕುತೂಹಲವೂ, ವಿರೋಧವೂ ಇದೆ. ವ್ಯಕ್ತಿಯ ಚಾರಿತ್ರ್ಯ ತಿಳಿಯಲು ಇವುಗಳ ಬಳಕೆಯಾಗುತ್ತಿದೆ. ಗೌಪ್ಯತೆಯನ್ನು ಬದಿಗಿಟ್ಟು ನಡೆಯುವ ವ್ಯವಹಾರಗಳು ಕೆಲವರ ಪಾಲಿಗೆ ಮುಳುವಾಗಿದೆ. ಸಂಪ್ರದಾಯವಾದಿಗಳ ಪಾಲಿಗೆ ಅಸಹ್ಯವಾಗಿದೆ. Offlineನಲ್ಲಿದ್ದಾಗ ಕಾಡುವ ಒಂಟಿತನ ಮಿಥ್ಯ ಜೀವನದ (Virtual Life) ಕಡೆಗೆ ಕೊಂಡೊಯ್ಯತ್ತಿದೆ. ಇದರ ನಡುವೆ, ಫೇಸ್ ಬುಕ್ ‘Timeline’ ಎನ್ನುವ ಹೊಸ ಅವತಾರದೊಂದಿಗೆ ಜನ್ಮ ಜಾಲಾಡಲು ಅಣಿಯಾಗಿದೆ. ಆದರೆ ಇದೆಲ್ಲವನ್ನು ವಿರೋಧಿಸುವ ಮೊದಲು, ಈ ತಾಣಗಳು ಮಾಹಿತಿ ಕಣಜವಾಗಿರುವುದನ್ನು ಅಲ್ಲಗಳೆಯುವಂತಿಲ್ಲ. ಅಷ್ಟೇ ಅಲ್ಲದೆ, ಎಲ್ಲದಕ್ಕೂ ವಿನಾಯಿತಿ ನೀಡುವ ಅಂತರ್ಜಾಲವೆಂಬ ಸೂಕ್ಷ್ಮ ವ್ಯವಸ್ಥೆಯೇ ಕಗ್ಗಂಟಾಗಿರುವಾಗ ಸಾಮಾಜಿಕ ತಾಣಗಳ ಬಗೆಗೆ ವೃಥಾ ಹಳಿಯಬೇಕಷ್ಟೆ. ಲಂಗು-ಲಗಾಮಿಲ್ಲದಿರುವುದರಿಂದ ವೈಮನಸ್ಸುಗಳು ಉಂಟಾದರೂ ಮತ್ತೆ ಮತ್ತೆ ಬೊಟ್ಟು ಮಾಡಿ ತೋರಿಸುವುದು ಅಭಿವ್ಯಕ್ತಿ ಸ್ವಾತಂತ್ರ್ಯವನ್ನೇ..!
                                               
                                                                  (ಕೃಪೆ:ವಿಜಯ ಕರ್ನಾಟಕ-29-12-2011)